ಬಂಟ್ವಾಳ: ಅತ್ತ ಮೈಸೂರಿನ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತಿದ ಶ್ರೀ ರಾಮಲಲ್ಲಾನ ವಿಗ್ರಹ ರಾಮಮಂದಿರದ ಪ್ರಾಣಪ್ರತಿಷ್ಠೆಗೆ ಆಯ್ಕೆಯಾದರೆ, ಇತ್ತ ಆ ತಂಡದಲ್ಲಿದ್ದ ದಕ್ಷಿಣ ಕನ್ನಡ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಮೂವಾಜೆಯ ಚಿದಾನಂದ ಆಚಾರ್ಯರಿಗೆ ತಾನೂ ಆ ತಂಡದಲ್ಲಿದ್ದ ಖುಷಿ.
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದಲ್ಲಿ ಶ್ರೀ ರಾಮಲಲ್ಲಾನ ವಿಗ್ರಹ ಪ್ರತಿಷ್ಠೆಗೆ ದಿನಗಣನೆ ಆರಂಭಗೊಂಡಿದ್ದರೆ, ಆ ವಿಗ್ರಹದ ಕೆತ್ತನೆಯಲ್ಲಿ ತೊಡಗಿಸಿಕೊಂಡ ಶಿಲ್ಪಿಗಳು ಪುಣ್ಯಕಾರ್ಯದಲ್ಲಿ ನೇರ ಪಾಲ್ಗೊಂಡ ಸಂತೃಪ್ತಿಯಲ್ಲಿದ್ದಾರೆ. ಈ ಪೈಕಿ ವಿಟ್ಲ ಉಕ್ಕುಡ ಸಮೀಪದ ಕಲ್ಲುರ್ಟಿಯಡ್ಕ ನಿವಾಸಿ ಚಿದಾನಂದ ಆಚಾರ್ಯರೂ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ತಂಡದಲ್ಲಿ ಸಹಾಯಕನಾಗಿ ತೊಡಗಿಸಿಕೊಂಡಿದ್ದರು. "ಕೆತ್ತನೆ ಕಾರ್ಯದಲ್ಲಿ ನನಗೂ ಅಳಿಲು ಸೇವೆಯಂಥ ರೀತಿಯಲ್ಲಿ ಕಾರ್ಯನಿರ್ವಹಿಸಲು ಅವಕಾಶ ದೊರಕಿರುವುದು ಪುಣ್ಯ" ಎಂದು ಅವರು ಸಂತಸಪಟ್ಟರು.
ಶಿಲ್ಪಕಲೆ ಅಭ್ಯಾಸ: ಶಿಲ್ಪಿ ಚಿದಾನಂದ ಅವರು ವಿಟ್ಲ ಅಳಿಕೆಯ ಮೂವಾಜೆಯ ಗೋಪಾಲ ಆಚಾರ್ಯ ಹಾಗೂ ಪುಷ್ಪಾವತಿ ದಂಪತಿಯ ಪುತ್ರ. ಅಳಿಕೆ ಸತ್ಯಸಾಯಿ ವಿದ್ಯಾಸಂಸ್ಥೆಯಲ್ಲಿ ಪಿಯುಸಿವರೆಗೆ ವಿದ್ಯಾರ್ಜನೆ ಮಾಡಿದ ಇವರು ಕಾರ್ಕಳದ ಕೆನರಾ ಬ್ಯಾಂಕ್ ಸಿ.ಇ.ಕಾಮತ್ ಇನಿಸ್ಟ್ಯೂಟ್ನಲ್ಲಿ ಒಂದೂವರೆ ವರ್ಷ ಶಿಲ್ಪಕಲೆಯನ್ನು ಅಭ್ಯಸಿಸಿ ಬಳಿಕ ಚಿಕ್ಕಬಳ್ಳಾಪುರದ ಡಾ.ಜಿ.ಜ್ಞಾನಾನಂದ ಅವರ ಬ್ರಹ್ಮ ಶ್ರೀ ಶಿಲ್ಪಗುರುಕುಲದಲ್ಲಿ ಸುಮಾರು 10 ವರ್ಷಗಳ ಕಾಲ ಇನ್ನೂ ಹೆಚ್ಚಿನ ಶಿಲ್ಪಕಲಾ ಅಧ್ಯಯನ ನಡೆಸಿದ್ದಾರೆ. ಆ ಬಳಿಕ ಬೆಂಗಳೂರಿನ ಸಾಂಪ್ರದಾಯಿಕ ಶಿಲ್ಪಗುರುಕುಲದಲ್ಲಿ 3 ವರ್ಷ ಪ್ರತಿಮಾ ಶಿಲ್ಪ ಹಾಗೂ 4 ವರ್ಷ ದೇವಾಲಯ ಶಿಲ್ಪವನ್ನು ಕಲಿತು, ಕಳೆದ 8 ವರ್ಷದಿಂದ ಅದೇ ಗುರುಕುಲದಲ್ಲಿ ಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಅಯೋಧ್ಯೆ ಕೆಲಸಕ್ಕೆ ಕರೆ: ಕಳೆದ ನಾಲ್ಕು ತಿಂಗಳ ಹಿಂದೆ ಮೈಸೂರಿನ ಅರುಣ್ ಯೋಗಿರಾಜ್ ಅವರು ಅಯೋಧ್ಯೆಯ ರಾಮಲಲ್ಲಾ ವಿಗ್ರಹದ ಕಾರ್ಯದ ಸಹಾಯಕ ಕೆಲಸಕ್ಕೆ ಶಿಲ್ಪಿಗಳು ಬೇಕು ಎಂದು ಸಂದೇಶ ಕಳುಹಿಸಿದ್ದರು. ಅದರಂತೆ ಚಿದಾನಂದ ಆಚಾರ್ಯ, ಪುತ್ತೂರಿನ ಸುಮಂತ್ ಆಚಾರ್ಯ, ಕೋಲಾರದ ಉಮಾಮಹೇಶ್ವರ ಹಾಗೂ ನಾರಾಯಣ ಆಚಾರ್ಯ ಅವರು ಅಯೋಧ್ಯೆಗೆ ತೆರಳಿದ್ದರು.
70 ದಿನಗಳ ಕೆಲಸ: "ಅಯೋಧ್ಯೆಯಲ್ಲಿ ರಾಮಲಲ್ಲಾ ವಿಗ್ರಹ ಕೆತ್ತನೆ ಕಾರ್ಯ ಅತ್ಯಂತ ಶ್ರದ್ಧೆಯಿಂದ ನಡೆದಿದೆ. ಕಟ್ಟುನಿಟ್ಟಿನ ನಿಯಮಗಳು ಅಲ್ಲಿ ಜಾರಿಯಾಗಿದ್ದವು. ಮೂರು ತಂಡಗಳು ಈ ವಿಗ್ರಹ ಕಾರ್ಯದಲ್ಲಿ ಅತೀವ ಶ್ರದ್ಧಾ ಭಕ್ತಿಯಿಂದ ತೊಡಗಿಸಿಕೊಂಡಿದ್ದು, ನಮಗೂ ಇದು ವಿಶೇಷ ಅನುಭವ ತಂದುಕೊಟ್ಟಿತು" ಎನ್ನುತ್ತಾರೆ ಚಿದಾನಂದ ಆಚಾರ್ಯ.
ಚಿದಾನಂದ ಆಚಾರ್ಯರ ತಂದೆ ದಿ.ಗೋಪಾಲ ಆಚಾರ್ಯರು ಟೈಲರ್ ವೃತ್ತಿ ನಿರ್ವಹಿಸುತ್ತಿದ್ದರು. ದೊಡ್ಡಪ್ಪ ಮರದ ಕೆಲಸ ಕೆತ್ತನೆ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಕಲ್ಲಿನ ಕೆತ್ತನೆ ಕಾರ್ಯದಲ್ಲಿ ಇವರ ಕುಟುಂಬದಲ್ಲಿ ಇವರೇ ಮೊದಲಿಗರು. ಹೀಗಿದ್ದರೂ ಅಯೋಧ್ಯೆಯ ಪುಣ್ಯ ಕಾರ್ಯದಲ್ಲಿ ಇವರ ಕಲಾ ಚತುರತೆಗೆ ಅವಕಾಶ ದೊರೆತಿರುವುದು ಇವರ ಕುಟುಂಬಕ್ಕೆ ಸಂತಸ ತಂದುಕೊಟ್ಟಿದೆ.
ಇದನ್ನೂ ಓದಿ: ಅಯೋಧ್ಯೆ: ಶ್ರೀರಾಮ ಪ್ರಾಣ ಪ್ರತಿಷ್ಠೆಯ 7 ದಿನಗಳ ಧಾರ್ಮಿಕ ವಿಧಿ ಇಂದಿನಿಂದ ಆರಂಭ