ಮಂಗಳೂರು: ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಸ್ವೀಪ್ ಸಮಿತಿ, ಜಿಲ್ಲಾಡಳಿತ ಮತದಾರರಿಗೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುವುದು ಸಾಮಾನ್ಯ. ಆದರೆ ಇಲ್ಲೊಬ್ಬರು ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಎಲ್ಲರ ಗಮನ ಸೆಳೆಯಲು, ಮದುವೆಯ ಆಮಂತ್ರಣ ಪತ್ರಿಕೆಯ ರೀತಿಯಲ್ಲಿ ಮುದ್ರಿಸಿದ್ದಾರೆ. ಇದು ಈಗ ಜಾಲತಾಣಗಳ ಮೂಲಕ ವೈರಲ್ ಆಗಿ ಎಲ್ಲರ ಗಮನ ಸೆಳೆಯುತ್ತಿದೆ.
ಮಂಗಳೂರಿನ ರಶೀದ್ ವಿಟ್ಲ ಎಂಬವರು ಈ ಮತದಾನ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದವರು. ಪ್ರಜಾಪ್ರಭುತ್ವದ ಹಬ್ಬ ಲೋಕಸಭಾ ಚುನಾವಣೆ-2019 ಎಂಬ ಶೀರ್ಷಿಕೆ ಇರುವ ಈ ಆಮಂತ್ರಣ ಪತ್ರಿಕೆಯಲ್ಲಿ ಮತದಾನದ ದಿನಾಂಕವನ್ನು ಶುಭ ಮುಹೂರ್ತ ಎಂದು ನಮೂದಿಸಿ, ಮತ ಚಲಾಯಿಸುವ ಸಮಯವನ್ನೂ ತಿಳಿಸಲಾಗಿದೆ. ದಯವಿಟ್ಟು ಉಡುಗೊರೆ ಕೊಡಬೇಡಿ ಮತ್ತು ಪಡೆಯಬೇಡಿ. ಬಲಿಷ್ಠ ಭಾರತ ಮತ್ತು ದೇಶದ ಅಭಿವೃದ್ಧಿಗೆ ಕೊಡುಗೆ ನೀಡಿ ಎಂದು ಮತದಾರರಿಗೆ ಜಾಗೃತಿ ಮೂಡಿಸಲಾಗಿದೆ.
ಅಲ್ಲದೆ ಅಸಮರ್ಥ ಅಭ್ಯರ್ಥಿ ಆಯ್ಕೆಯಾದರೆ ಉತ್ತಮ ಜನರು ಮತದಾನ ಮಾಡಿಲ್ಲ ಎಂದರ್ಥ ಎಂದು ಕೊನೆಯದಾಗಿ ತಿಳಿಸಲಾಗಿದೆ. ಒಟ್ಟಿನಲ್ಲಿ ಮತದಾರರಿಗೆ ಜಾಗೃತಿ ಮೂಡಿಸುವ ಸಲುವಾಗಿ ರಶೀದ್ ವಿಟ್ಲ ಅವರ ವಿಭಿನ್ನ ಪ್ರಯತ್ನ ಜಾಲತಾಣಗಳಲ್ಲಿ ವೈರಲ್ ಆಗಿ ಜನಮೆಚ್ಚುಗೆ ಗಳಿಸುತ್ತಿದೆ.