ಮಂಗಳೂರು: ಒಂದೇ ಮ್ಯಾನೇಜ್ಮೆಂಟ್ಗೆ ಒಳಪಟ್ಟ ಎರಡು ನರ್ಸಿಂಗ್ ಕಾಲೇಜಿನ 23 ಕೇರಳ ರಾಜ್ಯದ ನರ್ಸಿಂಗ್ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಗೊಂಡ ಹಿನ್ನೆಲೆಯಲ್ಲಿ ಶಿಕ್ಷಣ ಸಂಸ್ಥೆಯ ವಿರುದ್ಧ ದ.ಕ.ಜಿಲ್ಲಾ ಆರೋಗ್ಯ ಇಲಾಖೆ ನೋಟಿಸ್ ಜಾರಿಗೊಳಿಸಿದೆ.
ನಗರದ ಸಿಟಿ ನರ್ಸಿಂಗ್ ಕಾಲೇಜು ಹಾಗೂ ರುಕ್ಮಿಣಿ ಶೆಟ್ಟಿ ನರ್ಸಿಂಗ್ ಕಾಲೇಜಿನಲ್ಲಿ 900 ವಿದ್ಯಾರ್ಥಿಗಳು ನರ್ಸಿಂಗ್ ತರಬೇತಿ ಪಡೆಯುತ್ತಿದ್ದಾರೆ. ಇವರಲ್ಲಿ 613 ಮಂದಿ ಕೇರಳದವರಾಗಿದ್ದು, ಉಳಿದವರು ದ.ಕ.ಜಿಲ್ಲೆಯ ವಿವಿಧ ಪ್ರದೇಶದವರಾಗಿದ್ದಾರೆ. ಇವರಲ್ಲಿ 200 ಮಂದಿ ಮಾತ್ರ ಕೋವಿಡ್ ನೆಗೆಟಿವ್ ವರದಿ ತಂದಿದ್ದು, ಉಳಿದಂತೆ ನಿನ್ನೆಯವರೆಗೆ 580 ಮಂದಿ ಕೋವಿಡ್ ತಪಾಸಣೆ ಮಾಡಲಾಗಿದ್ದು, ಅವರಲ್ಲಿ 23 ಮಂದಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ.
ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯಿರಿ ಮಾತನಾಡಿ, ದ.ಕ.ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಇಲಾಖೆಯ ಆದೇಶದಂತೆ ಕಾಲೇಜಿಗೆ ಹಾಜರಾಗುವ ವಿದ್ಯಾರ್ಥಿಗಳು 72 ಗಂಟೆಗಳ ಆರ್ಟಿಪಿಸಿಆರ್ ತಪಾಸಣೆ ಮಾಡಿ ಕೋವಿಡ್ ನೆಗೆಟಿವ್ ವರದಿಯೊಂದಿಗೆ ಕಾಲೇಜಿಗೆ ಹಾಜರಾಗಬೇಕು. ಆ ಕಾಲೇಜಿನಲ್ಲಿಯೂ ಸರ್ಕಾರದ ಕೋವಿಡ್ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ತಿಳಿಸಿದ್ದರೂ, ಕಾಲೇಜು ಆಡಳಿತ ಮಂಡಳಿ ಸರಕಾರದ ನಿಯಮಗಳನ್ನು ಗಾಳಿಗೆ ತೂರಿ ತರಗತಿ ಆರಂಭಿಸಿದೆ. ತರಗತಿ ನಡೆಸುವಾಗಲೂ ಸಣ್ಣ ಕೋಣೆಯಲ್ಲಿ ಅಧಿಕ ಮಂದಿ ವಿದ್ಯಾರ್ಥಿಗಳನ್ನು ಹಾಕಿ ತರಗತಿ ನಡೆಸಲಾಗುತ್ತಿತ್ತು. ಅದೇ ರೀತಿ, ಹಾಸ್ಟೆಲ್ ಗಳಲ್ಲಿಯೂ ಒಂದು ಕೋಣೆಯಲ್ಲಿ 4-6 ಮಂದಿಯನ್ನು ಹಾಕಲಾಗಿತ್ತು ಎಂದು ಕಾಲೇಜು ಆಡಳಿತ ಮಂಡಳಿ ವಿರುದ್ಧ ಜಿಲ್ಲಾ ಆರೋಗ್ಯ ಇಲಾಖೆ ನೋಟಿಸ್ ಜಾರಿಗೊಳಿಸಿದೆ ಎಂದರು.
ಈ ಬಗ್ಗೆ ಕಾಲೇಜು ಆಡಳಿತ ಮಂಡಳಿ ಎರಡು ದಿನಗಳ ಕಾಲ ಸಮಯಾವಕಾಶ ಕೇಳಿದ್ದು, ಉತ್ತರ ನೀಡುತ್ತೇವೆ ಎಂದು ಪ್ರತಿಕ್ರಿಯಿಸಿದೆ.