ಮಂಗಳೂರು: ನಗರದಲ್ಲಿ ಮತ್ತೆ ಬ್ಯಾನರ್ ವಿವಾದ ತಲೆದೋರಿದೆ. ಇಂದು ಪಂಪ್ ವೆಲ್ ಮೇಲ್ಸೇತುವೆಗೆ ಮತ್ತೆ ವೀರಸಾವರ್ಕರ್ ಫೋಟೋ ಇರುವ ಬ್ಯಾನರ್ ಅಳವಡಿಸಿ ವಿವಾದ ಸೃಷ್ಟಿಸಲಾಗಿದೆ.
ಮೊನ್ನೆ ರಾತ್ರಿ ಇದೇ ರೀತಿ ಪಂಪ್ ವೆಲ್ ಫ್ಲೈಓವರ್ ಗೆ ವೀರ ಸಾವರ್ಕರ್ ಮೇಲ್ಸೇತುವೆ ಪಂಪ್ ವೆಲ್ ಎಂಬ ಬ್ಯಾನರ್ ಅಂಟಿಸಲಾಗಿತ್ತು. ರಾತ್ರಿ ಎಂಟು ಗಂಟೆಗೆ ಈ ಬ್ಯಾನರ್ ಕಂಡು ಬಂದಿದ್ದು, ಬಳಿಕ ಈ ವಿಷಯ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ರಾತ್ರಿ 9 ಗಂಟೆಗೆ ಬ್ಯಾನರ್ ಮಾಯವಾಗಿತ್ತು. ಇದೀಗ ಮೊನ್ನೆ ಹಾಕಿರುವ ಬ್ಯಾನರ್ ಕಿತ್ತು ಹಾಕಿದ ಬೆನ್ನಲ್ಲೇ ಮತ್ತೆ ಹೊಸ ಬ್ಯಾನರ್ ಕಂಡುಬಂದಿದೆ. ಆ ಜಾಗದಲ್ಲಿ ಮೊನ್ನೆ ಯಂತೆ ಬಜರಂಗದಳ ಎಂದು ಬರೆಯಲಾಗಿದೆ.
ಅಲ್ಲದೆ ಮಂಗಳೂರಿನ ನೆಹರೂ ಮೈದಾನಕ್ಕೆ ಕೋಟಿ ಚೆನ್ನಯ್ಯ ಬ್ಯಾನರ್ ಹಾಗೂ ತೊಕ್ಕೊಟ್ಟು ಫ್ಲೈ ಓವರ್ ಗೆ ವೀರ ರಾಣಿ ಅಬ್ಬಕ್ಕನ ಹೆಸರಿನ ಬ್ಯಾನರ್ ಅಳವಡಿಸಲಾಗಿದೆ. ಈ ರೀತಿ ರಾತ್ರಿ ಹೊತ್ತು ಅಪರಿಚಿತರಿಂದ ಮರು ನಾಮಕರಣ ಹೊಂದಿರುವ ಬ್ಯಾನರ್ ಅಳವಡಿಕೆ ಮಾಡಲಾಗುತ್ತಿದೆ. ಮೊನ್ನೆಯ ಪ್ರಕರಣ ತಿಳಿಯಾಗುವ ಮುನ್ನವೇ ಮತ್ತೆ ಈ ರೀತಿಯಲ್ಲಿ ಬ್ಯಾನರ್ ಅಳವಡಿಕೆ ಮಾಡಿರುವುದರ ಹಿಂದೆ ಯಾವುದೋ ದುರುದ್ದೇಶವಿದೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಈ ಬಗ್ಗೆ ಜಿಲ್ಲಾಡಳಿತ ತಕ್ಷಣ ಎಚ್ಚೆತ್ತುಕೊಳ್ಳಬೇಕಾಗಿದೆ.