ಮಂಗಳೂರು: ಕರಾವಳಿ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತದೆ. ಅದರಲ್ಲಿಯೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಧರ್ಮಾಧಾರಿತ ಸಂಘರ್ಷಗಳು ಸಾಮಾನ್ಯವಾಗುತ್ತಿವೆ. ಹಿಜಾಬ್ ವಿವಾದದಿಂದ ಹಿಡಿದು ವಿವಿಧ ಹತ್ಯೆ, ಗೋಹತ್ಯೆ, ನೈತಿಕ ಪೊಲೀಸ್ ಗಿರಿ ಪ್ರಕರಣಗಳು ಜಿಲ್ಲೆಯಲ್ಲಿ ನಡೆದಿವೆ.
ನೈತಿಕ ಪೊಲೀಸ್‌ಗಿರಿ: ಹಿಂದೂ ಯುವತಿಯರೊಂದಿಗೆ ಮುಸ್ಲಿಂ ಧರ್ಮದ ಯುವಕರು ಮಾತನಾಡಿದ, ಪ್ರೀತಿಸಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ನೈತಿಕ ಪೊಲೀಸ್‌ಗಿರಿ ನಡೆದಿದೆ. ಬಸ್‌ನಲ್ಲಿ ಒಟ್ಟಿಗೆ ಪ್ರಯಾಣಿಸಿದ ಅನ್ಯಕೋಮಿನ ಜೋಡಿಗಳ ಮೇಲೆ ಹಲ್ಲೆ ನಡೆಸಿರುವುದು, ಗುಡ್ಡವೊಂದಕ್ಕೆ ತಿರುಗಾಡಲು ಹೋಗಿದ್ದ ಜೋಡಿಯ ಮೇಲೆ ಹಲ್ಲೆ, ವ್ಯಾಪಾರಕ್ಕೆ ಹೋಗಿದ್ದ ಯುವಕರು ಕಿರುಕುಳ ನೀಡಿದ್ದಾರೆ ಎಂದು ಹಲ್ಲೆ ಮಾಡಿದ್ದು, ಬಸ್‌ನಲ್ಲಿ ವಿದ್ಯಾರ್ಥಿನಿ ನೀಡಿದ ಬ್ಯಾಗ್ ಹಿಡಿದುಕೊಂಡಿದ್ದ ಪ್ರಯಾಣಿಕ ಆಕೆಗೆ ಕಿರುಕುಳ ನೀಡಿದ್ದನೆಂದು ಹಲ್ಲೆ.. ಹೀಗೆ ಅನೇಕ ನೈತಿಕ ಪೊಲೀಸ್‌ಗಿರಿ ಪ್ರಕರಣಗಳು ವರದಿಯಾಗಿವೆ. ಇವುಗಳಲ್ಲಿ ಕೆಲವು ಪ್ರಕರಣಗಳು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರೆ, ಹಲವು ಪ್ರಕರಣಗಳು ಬೆಳಕಿಗೆ ಬಂದಿಲ್ಲ.
ಗೋಹತ್ಯೆ ವಿಚಾರ: ಗೋಹತ್ಯೆ ವಿಚಾರ ಧರ್ಮ ಸಂಘರ್ಷಕ್ಕೆ ಕಾರಣವಾಗಿತ್ತು. ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೂ ಮುನ್ನ ಜಿಲ್ಲೆಯಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ಹಲ್ಲೆ ಪ್ರಕರಣಗಳು ನಡೆದಿದ್ದವು. ಕಾಯ್ದೆಯ ನಂತರ ಗೋ ವಧೆ ನಡೆಸಿದ ಸುಮಾರು ಹತ್ತು ಕಡೆ ಆಸ್ತಿ ಮುಟ್ಟುಗೋಲು ಹಾಕಲಾಗಿದೆ.
ಹಿಜಾಬ್ ಪರ-ವಿರೋಧ ವಿವಾದ: ಉಡುಪಿ ಜಿಲ್ಲೆಯಲ್ಲಿ ಕಳೆದ ವರ್ಷ ಸುದ್ದಿ ಮಾಡಿದ್ದ ಹಿಜಾಬ್ ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ವರ್ಷದಲ್ಲಿ ದೊಡ್ಡ ಮಟ್ಟದ ಚರ್ಚೆ ಹುಟ್ಟುಹಾಕಿತ್ತು. ಮಂಗಳೂರು ವಿವಿ ಕಾಲೇಜಿನಲ್ಲಿ ಮೊದಲ ಬಾರಿಗೆ ಹಿಜಾಬ್ ವಿಚಾರ ಸದ್ದು ಮಾಡಿತ್ತು. ಆರಂಭದಲ್ಲಿ ಕಾಲೇಜಿನಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಿದ್ದ ಮಂಗಳೂರು ವಿವಿ ಬಳಿಕ ಸಿಂಡಿಕೇಟ್ ಸಭೆಯಲ್ಲಿ ಹಿಜಾಬ್ ಅವಕಾಶ ನಿರಾಕರಿಸಿ ನಿರ್ಧಾರ ತೆಗೆದುಕೊಂಡಿತ್ತು. ಇದರಿಂದ ಸುಮಾರು 15 ಮುಸ್ಲಿಂ ವಿದ್ಯಾರ್ಥಿನಿಯರು ಹೋರಾಟ ಪ್ರಾರಂಭಿಸಿದರು. ಹಲವು ವಿದ್ಯಾರ್ಥಿನಿಯರು ಶಿಕ್ಷಣವನ್ನೂ ಮೊಟಕುಗೊಳಿಸಿದರು. ಆ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಾಲೇಜಿನಲ್ಲಿ ಹಿಜಾಬ್ ಕುರಿತು ಪ್ರತಿಭಟನೆ ನಡೆದಿತ್ತು.
ಅನ್ಯಧರ್ಮೀಯರಿಗೆ ವ್ಯಾಪಾರ ನಿರ್ಬಂಧ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ಪ್ರಸಿದ್ಧ ದೇವಾಲಯಗಳಿವೆ. ಇಲ್ಲಿ ಕೆಲ ಹಿಂದೂಪರ ಸಂಘಟನೆಗಳು ಅನ್ಯಧರ್ಮಿಯರಿಗೆ ವ್ಯಾಪಾರಕ್ಕೆ ಅವಕಾಶ ಕೊಡಬಾರದು ಎಂದು ಪಟ್ಟು ಹಿಡಿದಿದ್ದವು. ಅಲ್ಲದೇ ಕೆಲವು ಕಡೆ ಈ ಬಗ್ಗೆ ಬ್ಯಾನರ್ಗಳನ್ನು ಅಳವಡಿಸಲಾಗಿತ್ತು. ಮೊದಲು ಮುಲ್ಕಿಯ ಬಪ್ಪನಾಡು ಕ್ಷೇತ್ರದ ಜಾತ್ರೆಯಲ್ಲಿ ಈ ವಿಚಾರ ಸದ್ದು ಮಾಡಿತು. ಈ ಬಗ್ಗೆ ಸಂಘಟನೆಗಳು ಬ್ಯಾನರ್ ಅಳವಡಿಸಿದ್ದವು. ಇದು ವಿವಾದಕ್ಕೆ ಕಾರಣವಾಗಿತ್ತು. ಬಳಿಕ ಜಿಲ್ಲೆಯ ಹಲವು ದೇವಾಲಯಗಳ ಜಾತ್ರೆಯಲ್ಲಿಯೂ ವಿಚಾರ ಸದ್ದು ಮಾಡಿತು. ಇತ್ತೀಚೆಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಜಾತ್ರೆಯಲ್ಲಿಯೂ ವಿವಾದ ಉಂಟಾಗಿತ್ತು.
ಇದನ್ನೂ ಓದಿ: ಜಲೀಲ್ ಹತ್ಯೆ ಪ್ರಕರಣ: ಆರೋಪಿಗಳ ಪತ್ತೆಗೆ 8 ಅಧಿಕಾರಿಗಳ ತಂಡ ರಚನೆ -ಪೊಲೀಸ್ ಕಮಿಷನರ್