ಮಂಗಳೂರು: ನಗರದಲ್ಲಿ ಆತಂಕ ಮೂಡಿಸುವ ಘಟನೆಯೊಂದು ನಡೆದಿದೆ. ಇಲ್ಲಿನ ಹಳೆ ವಿಮಾನ ನಿಲ್ದಾಣದ ರನ್ ವೇಯಲ್ಲಿ ನಿನ್ನೆ ರಾತ್ರಿ ಅಪರಿಚಿತ ವ್ಯಕ್ತಿಯೊಬ್ಬ ಕಾಣಿಸಿಕೊಂಡಿದ್ದು, ಆತನನ್ನು ಸಿಐಎಸ್ಎಫ್ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.
ಸೋಮವಾರ ರಾತ್ರಿ 11 ಗಂಟೆ ಸುಮಾರಿಗೆ ಹಳೆಯ ವಿಮಾನ ನಿಲ್ದಾಣದ ರನ್ ವೇ ಬಳಿ ಅಪರಿಚಿತ ವ್ಯಕ್ತಿ ತಿರುಗಾಡುತ್ತಿದ್ದ. ಏರ್ಪೋರ್ಟ್ನ ಎಟಿಎಸ್ ವಿಭಾಗದಲ್ಲಿ ರನ್ ವೇ ಕಾಮಗಾರಿ ನಡೆಯುತ್ತಿದ್ದು, ರಾತ್ರಿ ಸಿಐಎಸ್ಎಫ್ ಸಿಬ್ಬಂದಿ ಗಸ್ತು ತಿರುಗುತ್ತಿದ್ದ ವೇಳೆ ವ್ಯಕ್ತಿ ಕಾಣಿಸಿಕೊಂಡಿದ್ದಾನೆ.
ಅಪರಿಚಿತನನ್ನು ವಿಚಾರಣೆ ನಡೆಸಿದ ಸಂದರ್ಭದಲ್ಲಿ ಪಶ್ಚಿಮ ಬಂಗಾಳದ ಮುರ್ಸಿದಾಬಾದ್ ಜಿಲ್ಲೆಯ ಬಧುಹಾ ಗ್ರಾಮದ ರಾಕೇಶ್ ಎಂದು ಹೇಳಿದ್ದಾನೆ. ಈತ ಲಾರಿಯ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದನಂತೆ. ಲಾರಿ ಡ್ರೈವರ್ ಸಂಬಳ ನೀಡದೆ ಇಲ್ಲಿ ಬಿಟ್ಟು ಹೋಗಿದ್ದಾನೆ ಎಂದು ಹೇಳಿದ್ದಾನೆ. ವಿಮಾನ ನಿಲ್ದಾಣ ಎಂದು ತಿಳಿಯದೆ ಈ ಭಾಗಕ್ಕೆ ಬಂದಿರುವುದಾಗಿ ಅಧಿಕಾರಿಗಳ ಎದುರು ಬಾಯ್ಬಿಟ್ಟಿದ್ದಾನೆ ಎಂದು ತಿಳಿದುಬಂದಿದೆ.
ನಿಷೇಧಿತ ಪ್ರದೇಶಕ್ಕೆ ಅಕ್ರಮ ಪ್ರವೇಶ ಮಾಡಿರುವುದರಿಂದ ಸಿಐಎಸ್ಎಫ್ ಸಿಬ್ಬಂದಿ ನೀಡಿದ ದೂರಿನಂತೆ ಬಜ್ಪೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ, ಈತನನ್ನು ವಶಕ್ಕೆ ಪಡೆದಿದ್ದಾರೆ.