ಮಂಗಳೂರು: ಬಂಗಾಳಕೊಲ್ಲಿಯ ಪಶ್ಚಿಮ ಮಧ್ಯಭಾಗದಲ್ಲಿ ವಾಯುಭಾರ ಕುಸಿತ ಉಂಟಾದ ಹಿನ್ನೆಲೆ ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಭಾರಿ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕಡಲುಗಳು ಭಾರಿ ಪ್ರಕ್ಷುಬ್ಧಗೊಂಡು ತೆರೆಗಳು ತೀರಕ್ಕೆ ಅಪ್ಪಳಿಸುತ್ತಿವೆ.
ಅರಬ್ಬಿಸಮುದ್ರವು ಭಾರಿ ಪ್ರಕ್ಷುಬ್ಧಗೊಂಡಿದ್ದು, ನಗರದ ಪಣಂಬೂರು, ಸೋಮೇಶ್ವರ, ಉಳ್ಳಾಲ ಸುರತ್ಕಲ್ ಭಾಗಗಳಲ್ಲಿ ಸಮುದ್ರದ ಅಬ್ಬರ ಹೆಚ್ಚುತ್ತಿವೆ. ಈ ಪ್ರದೇಶಗಳಲ್ಲಿ ಭಾರೀ ಗಾತ್ರದ ಅಲೆಗಳು ಸಮುದ್ರ ತೀರಕ್ಕೆ ಅಪ್ಪಳಿಸುತ್ತಿದ್ದು, ಪಣಂಬೂರು ಬೀಚ್ ಪರಿಸರದಲ್ಲಿ ಕಡಲ್ಕೊರೆತ ಉಂಟಾಗಿದೆ. ಪರಿಣಾಮ ಕಡಲ ತೀರದ ಅಂಗಡಿಗಳಿಗೆ ಹಾನಿಯಾಗಿದೆ.
ವಾಯುಭಾರ ಕುಸಿತದ ಹಿನ್ನೆಲೆ ಪ್ರವಾಸಿಗರು ಮತ್ತು ಮೀನುಗಾರರು ಕಡಲಿಗೆ ಇಳಿಯದಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಸೂಚನೆ ನೀಡಿದೆ. ಆದರೆ ಪ್ರವಾಸಿಗರು ಜಿಲ್ಲಾಡಳಿತದ ಸೂಚನೆ ಲೆಕ್ಕಿಸದೆ ಸಮುದ್ರಕ್ಕಿಳಿಯದಂತೆ ಹಾಕಿದ್ದ ತಡೆಬೇಲಿಯನ್ನು ದಾಟಿ ಮೋಜು ಮಾಡುತ್ತಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ವಾಯುಭಾರ ಕುಸಿತದ ಪರಿಣಾಮ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಎರಡು ದಿನಗಳಿಂದ ಮಳೆ ಬಿರುಸು ಪಡೆಯುತ್ತಿದ್ದು, ಮಳೆ ಮುಂದುವರಿಯಲಿದೆ. ಈ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.