ಮಂಗಳೂರು: ಮನಪಾ ಆಯುಕ್ತ ಶಾನಾಡಿ ಅಜಿತ್ ಹೆಗ್ಡೆ ಶಾಸಕ ಉಮಾನಾಥ ಕೋಟ್ಯಾನ್ ನಿಂದಿಸಿರುವುದಾಗಿ ಆರೋಪಿಸಿದ್ದು, ಅವರ ಮೇಲೆ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಪತ್ರ ಬರೆಯುವಂತೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಆದೇಶ ನೀಡಿದರು.
ಇಂದು ದ.ಕ.ಜಿಪಂ ನೇತ್ರಾವತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಗೆ ಹಾಜರಾಗಿದ್ದ ಮುಲ್ಕಿ- ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ಮನಪಾ ಆಯುಕ್ತ ಶಾನಾಡಿ ಅಜಿತ್ ಹೆಗ್ಡೆಯವರು ತಮಗೆ 'ಅಧಿಕಾರ ಸಿಕ್ಕಿದ್ದು ತಲೆಗಡರಿದೆ' ಎಂದು ನಿಂದನೆ ಮಾಡಿದ್ದಾರೆಂದು ಆರೋಪಿಸಿ ಸಭೆಯಿಂದ ಹೊರ ನಡೆದ ಘಟನೆ ನಡೆದಿದೆ. ಈ ಸಂದರ್ಭ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಅವರನ್ನು ತಡೆದರೂ, ಅವರು ತಮಗೆ ಈ ಮಾತಿನಿಂದ ನೋವಾಗಿದೆ ಎಂದು ಸಭೆಯನ್ನು ಬಹಿಷ್ಕರಿಸಿ ಹೊರ ನಡೆದರು.
ಈ ಸಂದರ್ಭ ಮಂಗಳೂರು ಮನಪಾ ಆಯುಕ್ತ ಶಾನಾಡಿ ಅಜಿತ್ ಹೆಗ್ಡೆಯವರು ಸ್ಪಷ್ಟನೆ ನೀಡಿ, 'ಮೂಡುಶೆಡ್ಡೆ ಗ್ರಾಪಂನಲ್ಲಿ ಬೋರ್ವೆಲ್ ಸಮಸ್ಯೆ ಆಗಿದೆ ಎಂದು ಶಾಸಕರು ಹೇಳಿದ್ದರು. ಅದಕ್ಕೆ ತಾನು ಅಲ್ಲಿಗೆ ಹೋಗಿ ಪರಿಶೀಲನೆ ನಡೆಸುವೆ ಎಂದಿದ್ದೆ. ಅಲ್ಲಿಗೆ ಹೋಗಿ ಪರಿಶೀಲನೆ ನಡೆಸಿ ಹೊಸ ಬೋರ್ವೆಲ್ ಮಾಡಲು ನಮ್ಮ ಇಂಜಿನಿಯರ್ ಗೆ ತಿಳಿಸಿದ್ದೆ. ಆದರೆ, ಅದೇ ದಿವಸ ರಾತ್ರಿ 9.45ಕ್ಕೆ ಶಾಸಕ ಉಮಾನಾಥ ಕೋಟ್ಯಾನ್ ತನಗೆ ದೂರವಾಣಿ ಕರೆ ಮಾಡಿ, ತನಗೆ ಮಾತನಾಡಲೂ ಅವಕಾಶ ನೀಡದೇ ಏರು ಧ್ವನಿಯಲ್ಲಿ ಮಾತನಾಡಿದ್ದಾರೆ. ಆ ಸಂದರ್ಭದಲ್ಲಿ ನಾನು ಸ್ವಲ್ಪ ಮಾತನಾಡಿದ್ದೆ. ಆದರೆ 'ಅಧಿಕಾರ ಸಿಕ್ಕಿದ್ದು ತಲೆಗಡರಿದೆ' ಎಂಬುದು ಸುಳ್ಳು' ಎಂದು ಹೇಳಿದರು.
ಈ ಬಗ್ಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಮಂಗಳೂರು ಮನಪಾ ಆಯುಕ್ತರು, ಶಾಸಕರಿಗೆ ನಿಂದನೆ ಮಾಡಿರುವುದಾಗಿ ಆರೋಪಿಸಿ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾಕ್ಕೆ ಪತ್ರ ಬರೆಯಲು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ಗೆ ಆದೇಶ ನೀಡಿದರು.