ಸುಳ್ಯ (ದಕ್ಷಿಣ ಕನ್ನಡ): ಈಜಲು ನದಿಗಿಳಿದು ಇಬ್ಬರು ಯುವಕರು ಮುಳುಗಿ ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ದೊಡ್ಡೇರಿ ಸಮೀಪದ ಪಯಸ್ವಿನಿ ನದಿಯಲ್ಲಿ ಶನಿವಾರ ನಡೆದಿದೆ. ಪುತ್ತೂರು ತಾಲೂಕಿನ ಕೌಡಿಚ್ಚಾರು ಸಮೀಪದ ಅರಿಯಡ್ಕದ ದೇರ್ಲ ನಾರಾಯಣ ಪಾಟಾಳಿ ಅವರ ಪುತ್ರ ಜಿತೇಶ್ (19) ಹಾಗೂ ಪಡುವನ್ನೂರು ಗ್ರಾಮದ ಅಂಬಟೆಮೂಲೆಯ ಕೃಷ್ಣ ನಾಯ್ಕ ಎಂಬುವವರ ಪುತ್ರ ಪ್ರವೀಣ್ (19) ಮೃತ ಯುವಕರು.
ಶನಿವಾರ ಪುತ್ತೂರಿನ ಕೌಡಿಚ್ಚಾರ್ ಸುತ್ತಮುತ್ತಲ 8 ಮಂದಿ ಯುವಕರು ಜತೆಯಾಗಿ ಸುಳ್ಯದ ಪಯಸ್ವಿನಿ ನದಿಗೆ ಈಜಲು ಬಂದಿದ್ದರು. ಯುವಕರಲ್ಲಿ ಓರ್ವ ನೀರಿಗಿಳಿದಿದ್ದ. ಆತ ಇಳಿದ ಸ್ಥಳ ಪ್ರಪಾತವಾಗಿದ್ದರಿಂದ ನೀರಿನಲ್ಲಿ ಮುಳುಗಿದ್ದಾನೆ. ಇದನ್ನು ಗಮನಿಸಿದ ಮತ್ತೋರ್ವ ಆತನನ್ನು ರಕ್ಷಿಸಲು ಹೋಗಿ ನೀರು ಪಾಲಾಗಿದ್ದಾನೆ ಎನ್ನಲಾಗ್ತಿದೆ. ಸುಳ್ಯದ ಓಡಬಾಯಿ ಬಳಿಯ ತೂಗು ಸೇತುವೆ ಸಮೀಪ ಕಾರನ್ನು ನಿಲ್ಲಿಸಿದ ಯುವಕರು ಸೇತುವೆಯಲ್ಲಿ ನಡೆದು ದೊಡ್ಡೇರಿಯ ಸಂಬಂಧಿಕರ ಮನೆಗೆ ಹೋಗಿ ಬಂದು ಬಳಿಕ ಪಯಸ್ವಿನಿ ನದಿಗೆ ಇಳಿದಿದ್ದರು. ಈ ವೇಳೆ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಸ್ಥಳೀಯ ಈಜುಗಾರರು ಯುವಕರ ಶವಗಳನ್ನು ಮೇಲೆತ್ತಿದ್ದಾರೆ.
ಯುವಕರು ಹುಲ್ಲು ತೆಗೆಯುವ ಕೆಲಸ ಮಾಡುತ್ತಿದ್ದರು. ಶನಿವಾರ ಪುತ್ತೂರಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕಾರ್ಯಕ್ರಮ ಇದ್ದ ಕಾರಣ ರಜೆ ಮಾಡಿ ಸುತ್ತಾಡಲು ಹೊರಟಿದ್ದರು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಸುಳ್ಯ ಪೊಲೀಸರು ಭೇಟಿ ನೀಡಿ ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ಈಜಲು ಹೋಗಿ ಹೊಂಡದಲ್ಲಿ ಮುಳಗಿ ಮೂವರು ಬಾಲಕರ ಸಾವು..
ಮೀನು ಹಿಡಿಯಲು ತೆರಳಿದಾತ ನೀರುಪಾಲು: ಸ್ನೇಹಿತನ ಜತೆ ಮೀನು ಹಿಡಿಯಲೆಂದು ತೆರಳಿದ್ದ ವ್ಯಕ್ತಿ ನದಿಗೆ ಬಿದ್ದು ಮೃತಪಟ್ಟ ಘಟನೆ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಬೆಳ್ತಂಗಡಿ ತಾಲೂಕಿನ ಮುಗೇರಡ್ಕ ಎಂಬಲ್ಲಿ ಕಳೆದ ಡಿ.26 ರಂದು ನಡೆದಿತ್ತು. ವ್ಯಕ್ತಿ ನೀರು ಪಾಲಾದ ಸ್ಥಳದಿಂದ 10 ಮೀಟರ್ ದೂರದಲ್ಲಿ ಡಿ.27ರಂದು ಬೆಳಿಗ್ಗೆ ಮೃತದೇಹ ಪತ್ತೆಯಾಗಿತ್ತು. ಬೆಳ್ತಂಗಡಿ ತಾಲೂಕಿನ ಮೊಗ್ರು ಗ್ರಾಮದ ದಂಡುಗ ನಿವಾಸಿ ಜನಾರ್ದನ (40ವರ್ಷ) ಎಂಬವರು ನದಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು. ಜನಾರ್ದನ ತನ್ನ ಸ್ನೇಹಿತ ಪದ್ಮುಂಜ ಸಮೀಪದ ಬೋಲೋಡಿ ನಿವಾಸಿ ಮಹೇಶ್ ಎಂಬವರೊಂದಿಗೆ ಮುಗೇರಡ್ಕದ ಕಾಮಗಾರಿ ಹಂತದಲ್ಲಿರುವ ಸೇತುವೆ ಬಳಿ ನೇತ್ರಾವತಿ ನದಿಯಲ್ಲಿ ಮೀನು ಹಿಡಿಯಲು ಬಲೆ ಹಾಕಲು ಡಿ.26 ರಂದು ಸಂಜೆ ತೆರಳಿದ್ದರು. ನದಿಗೆ ಬಲೆ ಇಳಿಸುವ ಸಂದರ್ಭದಲ್ಲಿ ಆಯತಪ್ಪಿ ನೀರು ಪಾಲಾಗಿದ್ದರು.
ಇದನ್ನೂ ಓದಿ: ಮೀನು ಹಿಡಿಯಲು ತೆರಳಿದಾತ ನೀರುಪಾಲು: ರಕ್ಷಣೆಗೆ ಧಾವಿಸದ ಗೆಳೆಯನಿಗೆ ಥಳಿತ
ಇಬ್ಬರು ಯುವಕರು ಸಾವು: ಗದಗ ತಾಲೂಕಿನ ಶ್ಯಾಗೋಟಿ ಗ್ರಾಮದ ಬಳಿ ಅಕ್ರಮವಾಗಿ ತೆಗೆದ ಕ್ವಾರಿಯ ಹೊಂಡದಲ್ಲಿ ಈಜಲು ಹೋಗಿದ್ದ ಇಬ್ಬರು ವಿದ್ಯಾರ್ಥಿಗಳು ಮುಳುಗಿ ಸಾವನ್ನಪ್ಪಿರುವ ಘಟನೆ ಇತ್ತೀಚೆಗೆ ನಡೆದಿತ್ತು. ಬಸವರಾಜ್ ಮತ್ತು ಈರಣ್ಣ ಎಂಬ ಯುವಕರು ಸ್ನೇಹಿತರ ಜೊತೆಗೆ ಕ್ವಾರಿಯ ಹೊಂಡದಲ್ಲಿ ಈಜಲು ಹೋಗಿದ್ದರು. ಆದರೆ ಇದರಲ್ಲಿ ಓರ್ವನಿಗೆ ಈಜಲು ಬರುತ್ತಿರಲಿಲ್ಲ. ಹೀಗಾಗಿ ಈಜಲು ಬರದ ಗೆಳೆಯನನ್ನು ರಕ್ಷಣೆ ಮಾಡಲು ಹೋಗಿದ್ದವ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದ.
ಇದನ್ನೂ ಓದಿ: ಗದಗ: ಈಜಲು ಹೋದ ಇಬ್ಬರು ವಿದ್ಯಾರ್ಥಿಗಳು ಸಾವು, ಕುಟುಂಬಸ್ಥರ ಆಕ್ರಂದನ