ಮಂಗಳೂರು: ಐಟಿ/ಬಿಟಿ ಉದ್ಯೋಗಿಗಳು ತಿಂಗಳಿಗೆ 60 ಸಾವಿರ ರೂ. ಸಂಬಳ ಗಳಿಸೋದು ಅಚ್ಚರಿಯ ಸಂಗತಿಯೇನಲ್ಲ. ಆದರೆ ತೆಂಗಿನಮರ ಹತ್ತಿ ಕಾಯಿ ಕೀಳುವ ಕಾಯಕ ಮಾಡುವ ಇವರ ತಿಂಗಳ ಪಗಾರ ಕೂಡಾ 60-80 ಸಾವಿರ ಅಂದ್ರೆ ನೀವು ನಂಬಲೇಬೇಕು.
ಸುಳ್ಯ ತಾಲೂಕಿನ ಮುರುಳ್ಯದ ಕಡೀರ ಗ್ರಾಮದ ವಿಠ್ಠಲ ಗೌಡ ಹಾಗೂ ಮಂಗಳೂರಿನ ಹೊರವಲಯದ ಸುರತ್ಕಲ್ ನಿವಾಸಿ ಅನುಷ್ ಎಂಬುವರೇ ದಿನವೊಂದಕ್ಕೆ 60-80 ತೆಂಗಿನ ಮರಗಳನ್ನೇರಿ ಕಾಯಿ ಕೀಳುವ ಮೂಲಕ ದಿನವೊಂದಕ್ಕೆ 2,000 - 2,500 ರೂ. ಗಳಿಸುತ್ತಾರೆ. ಓರ್ವನಿಗೆ ದಿನವೂ ಅಷ್ಟೊಂದು ಮರವೇರಲು ಸಾಧ್ಯವೇ? ಎಂದು ಯಾರಾದರೂ ಆಶ್ಚರ್ಯ ಪಡಬಹುದು. ಇವರು ಸಾಂಪ್ರದಾಯಿಕ ಶೈಲಿ ಹೊರತಾಗಿ ತೆಂಗಿನ ಮರವೇರುವ ಸಾಧನವೊಂದರ ಸಹಾಯದಿಂದ ಮರ ಹತ್ತುತ್ತಾರೆ. ಈ ಮೂಲಕ ದಿನವೂ ಯಾವುದೇ ಪರಿಶ್ರಮವಿಲ್ಲದೆ ಬೆಳಗ್ಗಿನಿಂದ ಸಂಜೆಯವರೆಗೆ 60-80 ಮರಗಳನ್ನೇರಿ ಕಾಯಿ ಕೀಳುತ್ತಾರೆ.
ಬದುಕು ಬದಲಿಸಿತು ತೆಂಗಿನ ಮರವೇರುವ ತರಬೇತಿ ಕಾರ್ಯಾಗಾರ:
ಹಿಂದೆ ಕೈ ಹಾಗೂ ಕಾಲಿಗೆ ಹಗ್ಗವನ್ನು ಬಳಸಿ ಸಾಂಪ್ರದಾಯಿಕ ಶೈಲಿಯಲ್ಲಿ ಕಾಯಿ ಕೇಳುತ್ತಿದ್ದರು. ಇದು ಬಹಳ ಪರಿಶ್ರಮದಾಯಕವಾಗಿದ್ದು, ಹೆಚ್ಚು ಮರ ಹತ್ತಲು ಸಾಧ್ಯವಾಗುತ್ತಿರಲಿಲ್ಲ. ಇದೇ ಸಮಯದಲ್ಲಿ ಮಂಗಳೂರಿನ ಕೃಷಿ ವಿಜ್ಞಾನ ಕೇಂದ್ರ(ಕೆವಿಕೆ) ಆಯೋಜಿಸಿರುವ ತೆಂಗು ಮರವೇರುವ ತರಬೇತಿಗೆ ಇಬ್ಬರೂ ಹಾಜರಾಗಿದ್ದರು. ಇದು ಅವರ ಇಡೀ ಜೀವನ ಶೈಲಿಯನ್ನು ಬದಲಾಯಿಸಿತು.
ಈ 'ತೆಂಗಿನಮರ ಸ್ನೇಹಿ' ಹೆಸರಿನ ತರಬೇತಿ ಕಾರ್ಯಾಗಾರ ಆರು ದಿನಗಳ ಕಾಲ ನಡೆಯುತ್ತಿದ್ದು, 150 ರೂ. ವಿದ್ಯಾರ್ಥಿ ವೇತನ ನೀಡಲಾಗುತ್ತಿತ್ತು. ಆದರೆ ತರಬೇತಿಯಲ್ಲಿ ಭಾಗವಹಿಸುವವರು ಕನಿಷ್ಠ 7ನೇ ತರಗತಿ ತೇರ್ಗಡೆಯಾಗಿರಬೇಕು. 35 ವರ್ಷ ದಾಟಿರಬಾರದು ಎಂಬ ನಿಯಮವಿತ್ತು. ಆದರೆ ತರಬೇತಿ ಕಾರ್ಯಾಗಾರಕ್ಕೆ ಅರ್ಜಿ ಹಾಕಿರುವ ವಿಠ್ಠಲ ಗೌಡರ ಆಗಿನ ವಯಸ್ಸು 45 ಆಗಿತ್ತು. ಆದ್ದರಿಂದ ಅವರಿಗೆ ತರಬೇತಿ ಕಾರ್ಯಾಗಾರದಲ್ಲಿ ಭಾಗವಗಿಸಲು ಸಾಧ್ಯವಾಗಲಿಲ್ಲ. ಆದರೆ ಪಟ್ಟು ಬಿಡದ ವಿಠ್ಠಲ ಗೌಡರು, 'ತಾನು ಕೃಷಿಕ, ತನಗೆ ದುಡಿಯಲು ಉತ್ಸಾಹವಿದೆ. ಇಲ್ಲಿ ತರಬೇತಿ ಪಡೆದಲ್ಲಿ ತನಗೆ ಸ್ವಾವಲಂಬನೆಯಾಗಿ ಜೀವನ ನಡೆಸಲು ಅನುಕೂಲವಾಗುತ್ತದೆ ಎಂದು ವಿನಂತಿಸಿಕೊಂಡಿದ್ದರು. ಬಳಿಕ ಕೆವಿಕೆ ವಿಠ್ಠಲ ಗೌಡರನ್ನು 'ವಿಶೇಷ ಅಭ್ಯರ್ಥಿ' ಎಂದು ಆಯ್ಕೆ ಮಾಡಿತು.
ಕಾರ್ಯಾಗಾರದಲ್ಲಿ 25-30 ಮಂದಿಗೆ ತರಬೇತಿ:
ಸಾಧನವನ್ನು ಜೋಡಿಸುವ ಕಲಿಕೆಯಿಂದ ಮರವೇರುವ ಕೆಲಸದವರೆಗೆ ತರಬೇತಿ ನೀಡಲಾಗುತ್ತದೆ. ಇಬ್ಬರೂ ಮೊದಲೇ ತೆಂಗಿನಮರ ಏರುತ್ತಿರೋದರಿಂದ ಈ ಸಾಧನ ಬಳಸಿ ಮರವೇರುವ ಕಾಯಕ ಸುಲಲಿತವಾಯಿತು. ಕಾರ್ಯಾಗಾರದ ಕೊನೆಗೆ ಲಿಖಿತ ಹಾಗೂ ಪ್ರ್ಯಾಕ್ಟಿಕಲ್ ಪರೀಕ್ಷೆ ಬರೆದು ಇಬ್ಬರೂ ತೇರ್ಗಡೆ ಹೊಂದಿದ್ದರು. ಆ ಬಳಿಕ ಇಬ್ಬರ ಭವಿಷ್ಯವೇ ತಿರುಗಿತು. ಇದೀಗ ಇಬ್ಬರನ್ನೂ ತೆಂಗಿನ ತೋಟದ ಮಾಲೀಕರು ಕಾಯಂ ಆಗಿ ಕಾಯಿ ಕೀಳಲು ಕರೆಯುತ್ತಿದ್ದಾರಂತೆ. ಅಬ್ಬಬ್ಬಾ ಅಂದ್ರೂ 100-125 ಮಂದಿ ತೆಂಗು ತೋಟದ ಮಾಲೀಕರು ಇಬ್ಬರನ್ನೂ ಮೂರು ತಿಂಗಳಿಗೊಮ್ಮೆ ಕರೆ ಮಾಡಿ ಕಾಯಿ ಕೀಳಿಸುತ್ತಾರಂತೆ. ಇವರು ತೆಂಗಿನ ಮರವೊಂದನ್ನು ಹತ್ತಲು 30-35 ರೂ. ಪಡೆಯುತ್ತಾರೆ. ದಿನವೂ 60-80 ಮರವೇರುತ್ತಾರಂತೆ.
ತೆಂಗು ಅಭಿವೃದ್ಧಿ ಮಂಡಳಿ ಪ್ರಾಯೋಜಿಸಿರುವ ತೆಂಗು ಸ್ನೇಹಿ ತರಬೇತಿ ಕಾರ್ಯಾಗಾರವನ್ನು 2013-16ರವರೆಗೆ ಆಯೋಜಿಸಿದ್ದರು. ಸುಮಾರು 200ಕ್ಕೂ ಅಧಿಕ ಮಂದಿ ಈ ತರಬೇತಿಯಲ್ಲಿ ಭಾಗವಹಿಸಿದ್ದರು. ಇದರಲ್ಲಿ ಮಹಿಳೆಯರೂ ಇದ್ದರೂ ಎನ್ನುವುದು ವಿಶೇಷವಾಗಿತ್ತು. ಈ ಕಾರ್ಯಾಗಾರದಲ್ಲಿ ತೆಂಗು ಬೆಳೆಸುವ ಬಗ್ಗೆ, ರೋಗಗಳ ಹತೋಟಿ, ತೆಂಗಿನ ಮರವೇರಿದಾಗ ಅದರ ಕಳೆಗಳನ್ನು ಯಾವ ರೀತಿ ತೆಗೆಯಬೇಕು, ಕಾಯಿ ಕೀಳುವ ಬಗ್ಗೆ ಐದು ದಿನಗಳ ತರಬೇತಿ ನೀಡಲಾಗಿತ್ತು. ಈಗಾಗಲೇ ಇಲ್ಲಿ ತರಬೇತಿ ಪಡೆದ ಹಲವಾರು ಮಂದಿ ಸ್ವಾವಲಂಬಿ ಜೀವನ ನಡೆಸುತ್ತಿದ್ದು, ಇವರು ಇನ್ನಷ್ಟು ಮಂದಿಗೆ ತರಬೇತಿ ನೀಡಿ ಉದ್ಯೋಗಾವಕಾಶ ಒದಗಿಸಿದ್ದಾರೆ.