ಮಂಗಳೂರು: ಪರಿಸರ ಪ್ರೇಮಿ ಜೀತ್ ಮಿಲನ್ ರೋಚ್ ಅವರು ನಗರದ ಸೆಂಟ್ರಲ್ ರೈಲು ನಿಲ್ದಾಣದ ರೈಲ್ವೆ ಫ್ಲ್ಯಾಟ್ ಫಾರಂಗಳಿಗೆ ತೊಂದರೆಯಾಗಿದ್ದ ಎರಡು ಬೃಹತ್ ಅಶ್ವತ್ಥ ವೃಕ್ಷಗಳನ್ನು ನಿರಂತರ 18ಗಂಟೆಗಳ ಅವಿರತ ಶ್ರಮದಿಂದ ಸ್ಥಳಾಂತರ ಮಾಡಿ ಯಶಸ್ವಿಯಾಗಿದ್ದಾರೆ.
ಗುರುವಾರ ಬೆಳಗ್ಗೆ 7ಗಂಟೆಗೆ ಅಶ್ವತ್ಥ ಮರಗಳ ಸ್ಥಳಾಂತರ ಕಾರ್ಯ ಆರಂಭಿಸಿದ ಅವರು ತಡರಾತ್ರಿ 1ಗಂಟೆಗೆ ಪೂರ್ಣಗೊಳಿಸಿದ್ದಾರೆ. 100 ಟನ್ಗಳಿಗಿಂತಲೂ ಅಧಿಕ ಭಾರವಿರುವ ಈ ಎರಡು ವೃಕ್ಷಗಳನ್ನು ಜಿಸಿಬಿ, ಕ್ರೈನ್ ಗಳನ್ನು ಬಳಸಿ ಚಾಕಚಕ್ಯತೆಯಿಂದ ಜೀತ್ ಮಿಲನ್ ಮತ್ತು ತಂಡ ಸ್ಥಳಾಂತರ ಮಾಡಿದೆ.
60-65 ವರ್ಷಗಳ ಈ ಮರಗಳು ಆರು ತಿಂಗಳ ಕಾಲದ ನಿರಂತರ ಪೋಷಣೆಯಲ್ಲಿ ಮತ್ತೆ ಚಿಗುರಲಿದೆ. ಈ ಎರಡು ಮರಗಳು ರೈಲ್ವೆ ಫ್ಲ್ಯಾಟ್ ಫಾರಂ ಬಳಿಯೇ ಇದ್ದವು. ರೈಲು ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ ಈ ಮರಗಳ ಸ್ಥಳಾಂತರ ಮಾಡಬೇಕಿತ್ತು. ಅದೇ ರೀತಿ ಅಲ್ಲಿ ಹಾದು ಹೋಗಿದ್ದ ಹೈಟೆನ್ಷನ್ ತಂತಿಯಿಂದ ಆಗಬಹುದಾದ ತೊಂದರೆ ನಿವಾರಿಸಿ ಮರಗಳ ಸ್ಥಳಾಂತರ ಕಾರ್ಯ ಮಾಡಲಾಗಿದೆ.
ನಿರಂತರ 18 ಗಂಟೆಗಳ ಶ್ರಮದಿಂದ ಅಶ್ವತ್ಥ ಮರಗಳನ್ನು ಯಾವುದೇ ತೊಂದರೆಯಿಲ್ಲದೇ ರೈಲು ನಿಲ್ದಾಣದ ಬಳಿಯೇ ವೃಕ್ಷಗಳನ್ನು ರೈಲ್ವೇ ಅಧಿಕಾರಿಗಳ ಮುತುವರ್ಜಿಯಿಂದ ಸ್ಥಳಾಂತರ ಮಾಡಲಾಗಿದೆ.
ಇದನ್ನೂ ಓದಿ: 200 ವರ್ಷಗಳ ಹಳೆಯ ಮರ ಕಡಿಯಲು ಮುಂದಾದ ಅರಣ್ಯ ಇಲಾಖೆ.. ಸ್ಥಳಾಂತರ ಮಾಡಿ ಉಳಿಸಲು ಅಭಿಮಾನ ಶುರು