ಸುಳ್ಯ: ಹಲವು ವರ್ಷಗಳ ಬಳಿಕ ಸರಕಾರ ವರ್ಗಾವಣೆ ಪ್ರಕ್ರಿಯೆಯನ್ನು ನಡೆಸಿದ್ದು ಅರಸಿನಮಕ್ಕಿ ಕಾಲೇಜು ಮತ್ತು ಬೆಳ್ಳಾರೆಯ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಪದವಿ ಪೂರ್ವ ಕಾಲೇಜಿನ ಎಲ್ಲಾ ಉಪನ್ಯಾಸಕರನ್ನು ವರ್ಗಾವಣೆ ಮಾಡಲಾಗಿದೆ. ಇದರಿಂದ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆ ಉಂಟಾಗಿ ಎರಡೂ ಕಾಲೇಜಿನ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬೆಳ್ಳಾರೆಯ ಪ.ಪೂ ಕಾಲೇಜಿನ ಪ್ರಥಮ ಪಿಯುಸಿ (ಕಲಾ, ವಾಣಿಜ್ಯ, ವಿಜ್ಞಾನ ವಿಭಾಗದಲ್ಲಿ)ಯಲ್ಲಿ 129 ವಿದ್ಯಾರ್ಥಿಗಳು, ದ್ವಿತೀಯ ಪಿಯುಸಿ(ಕಲಾ, ವಾಣಿಜ್ಯ, ವಿಜ್ಞಾನ)ಯಲ್ಲಿ 129 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 258 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಬೆಳ್ತಂಗಡಿ ತಾಲೂಕಿನ ಅರಸಿನಮಕ್ಕಿಯ ಪ.ಪೂ ಕಾಲೇಜಿಲ್ಲಿ ಪ್ರಥಮ ಮತ್ತು ದ್ವಿತೀಯ ಪಿಯುಸಿಯಲ್ಲಿ ಒಟ್ಟು 60 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಪ್ರಸ್ತುತ ಎಲ್ಲಾ ಹುದ್ದೆಗಳೂ ಖಾಲಿ: ಬೆಳ್ಳಾರೆಯಲ್ಲಿ ಪ್ರಥಮ, ದ್ವಿತೀಯ ಪಿಯುಸಿ ತರಗತಿಗಳಿಗೆ ಸಂಬಂಧಿಸಿದಂತೆ ಈಗ ಎಲ್ಲಾ ಹುದ್ದೆಗಳು ಖಾಲಿ ಇವೆ. ಪ್ರಾಂಶುಪಾಲರ ಹುದ್ದೆ, ವಿವಿಧ ಐಚ್ಛಿಕ ಭಾಷೆ, ಕಡ್ಡಾಯ ಭಾಷೆ, ಇತರೆ ವಿಷಯಗಳ ಮೂರು ವಿಭಾಗದ ತರಗತಿ ನಡೆಸುವ ಉಪನ್ಯಾಸಕರ ಹುದ್ದೆ ಖಾಲಿಯಾಗಿದೆ. ಸದ್ಯಕ್ಕೆ ಒಟ್ಟು ನಾಲ್ಕು ಉಪನ್ಯಾಸಕರು ಸಿಬಿಸಿ ನೆಲೆಯಲ್ಲಿ ಜವಾಬ್ದಾರಿ ನಿಭಾಯಿಸಬೇಕಾಗಿದೆ.
ಪ್ರಸ್ತುತ ಪ.ಪೂ. ಕಾಲೇಜಿನ ಯಾವುದೇ ನೇಮಕಾತಿ ನಡೆಯದೇ ಇರುವುದರಿಂದ ಇಲ್ಲಿನ ಹುದ್ದೆಗಳು ಯಾವಾಗ ಭರ್ತಿ ಮಾಡಲಾಗುತ್ತದೆ ಎಂಬ ಬಗ್ಗೆ ಯಾರಿಗೂ ಮಾಹಿತಿ ಲಭ್ಯವಾಗಿಲ್ಲ. ಬೋಧಕೇತರ ಹುದ್ದೆಯೂ ಖಾಲಿ ಇದೆ. ಬೆಳ್ಳಾರೆಯಲ್ಲಿ ಪ್ರಭಾರ ಪ್ರಾಂಶುಪಾಲರಾಗಿದ್ದ ವಿಶ್ವನಾಥ ಗೌಡ ಅವರಿಗೆ ಸುಳ್ಯ ಜೂನಿಯರ್ ಕಾಲೇಜಿಗೆ ವರ್ಗಾವಣೆಯಾಗಿದ್ದು, ಪ್ರಸ್ತುತ ಅವರನ್ನು ಸ್ವಲ್ಪ ಸಮಯ ಬೆಳ್ಳಾರೆಯಲ್ಲಿ ಇರುವಂತೆ ಮನವಿ ಮಾಡಲಾಗಿದೆ.
ಇನ್ನು ಉಪನ್ಯಾಸಕರ ವರ್ಗಾವಣೆಯಿಂದ ಬೆಳ್ಳಾರೆ ಹಾಗೂ ಬೆಳ್ತಂಗಡಿ ಅರಸಿನಮಕ್ಕಿ ಕಾಲೇಜುಗಳಲ್ಲಿ ಸಮಸ್ಯೆಯಾಗಿರುವ ಬಗ್ಗೆ ಗಮನಕ್ಕೆ ಬಂದಿದ್ದು, ಈಗಾಗಲೇ ಅತಿಥಿ ಶಿಕ್ಷಕರನ್ನು ತೆಗೆದುಕೊಳ್ಳಲು ಸೂಚಿಸಲಾಗಿದೆ. ವರ್ಗಾವಣೆಯಾದವರನ್ನೂ ಡೆಪ್ಯೂಟೇಷನ್‌ನಲ್ಲಿ ಸದ್ಯ ಕರ್ತವ್ಯ ನಿರ್ವಹಿಸಲು ಸೂಚಿಸಿದ್ದೇನೆ. ಮಕ್ಕಳಿಗೆ ಯಾವುದೇ ತರಹ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ಡಿಡಿಪಿಯು ಜಯಣ್ಣ ಈಟಿವಿ ಭಾರತಕ್ಕೆ ಹೇಳಿದ್ದಾರೆ.
ಇದನ್ನೂ ಓದಿ: ರಾಜ್ಯದ 10 ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಹುದ್ದೆಗೆ ಮೀಸಲಾತಿ ನಿಗದಿ