ಮಂಗಳೂರು: ಕೊರೊನಾ ಸೋಂಕಿಗೆ ಸಾವನ್ನಪ್ಪುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ದ.ಕ.ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ ಇಬ್ಬರು ಬಲಿಯಾಗಿದ್ದಾರೆ.
ಸುರತ್ಕಲ್ ಸಮೀಪದ ಇಡ್ಯಾ ನಿವಾಸಿ 31 ವರ್ಷದ ಯುವಕ ಹಾಗೂ ಬಂಟ್ವಾಳ ತಾಲೂಕಿನ 57 ವರ್ಷದ ವೃದ್ಧೆ ಸಾವನ್ನಪ್ಪಿರುವವರು.
ನಗರದ ಸುರತ್ಕಲ್ ಸಮೀಪದ ಇಡ್ಯಾ ನಿವಾಸಿ 31 ವರ್ಷದ ಯುವಕನಿಗೆ ಜೂ.26 ರಂದು ಆರೋಗ್ಯ ಸಮಸ್ಯೆ ಕಂಡುಬಂದಿದ್ದು ಅವರನ್ನು ತಕ್ಷಣ ಚಿಕಿತ್ಸೆಗಾಗಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ ಹೈಪೋಥೈರಾಯ್ಡಿಸಂ ಸಮಸ್ಯೆ ಇದ್ದು, ಆಸ್ಪತ್ರೆಗೆ ಬರುವಾಗಲೇ ಬಹಳ ಗಂಭೀರ ಸ್ಥಿತಿಯಲ್ಲಿದ್ದರು. ಅವರ ಗಂಟಲು ದ್ರವದ ಮಾದರಿಯನ್ನು ತಪಾಸಣೆಗೆ ರವಾನಿಸಲಾಗಿತ್ತು. ನಿನ್ನೆ ವರದಿ ಬಂದಿದ್ದು, ಅವರಿಗೆ ಸೋಂಕು ಇರುವುದು ಖಾತ್ರಿಯಾಗಿದೆ. ಆದರೆ ಚಿಕಿತ್ಸೆಗೆ ಸ್ಪಂದಿಸದೆ ನಿನ್ನೆ ರಾತ್ರಿ ಸುಮಾರು 11ಗಂಟೆ ವೇಳೆಗೆ ಮೃತಪಟ್ಟಿದ್ದಾರೆ.
ಬಂಟ್ವಾಳದ ವೃದ್ಧೆಯೂ ಸೋಂಕು ತಗುಲಿ ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇವರಿಗೂ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಮೃತಪಟ್ಟಿದ್ದಾರೆ.