ಮಂಗಳೂರು: ಜಪಾನಿನ ಟೋಕಿಯೊದಲ್ಲಿ ಜುಲೈ 23ರಿಂದ ನಡೆಯುವ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಇಬ್ಬರು ಕ್ರೀಡಾ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ್ ಆಳ್ವ ತಿಳಿಸಿದ್ದಾರೆ.
ಮೂಡಬಿದಿರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧನಲಕ್ಷಿ ಹಾಗೂ ಶುಭ ಇವರು ಒಲಿಂಪಿಕ್ಸ್ಗೆ ಆಯ್ಕೆಯಾಗಿದ್ದಾರೆ. ಇವರು 4x400 ಮಿಕ್ಸೆಡ್ ರಿಲೇಯಲ್ಲಿ ದೇಶದ ತಂಡವನ್ನು ಪ್ರತಿನಿಧಿಸಲಿದ್ದಾರೆ. ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಿಂದ 2016-17 ನೇ ಶೈಕ್ಷಣಿಕ ವರ್ಷದಿಂದ ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಅಖಿಲಭಾರತ ಅಂತರ್ ವಿಶ್ವವಿದ್ಯಾನಿಲಯ ಕೂಟಗಳಲ್ಲಿ ಇವರು ಪ್ರತಿನಿಧಿಸಿದ್ದರು ಎಂದು ಹೇಳಿದ್ದಾರೆ.
ಈ ಸಾಲಿನ ಒಲಿಂಪಿಕ್ಸ್ಗೆ ಆಯ್ಕೆಯಾದ ಇಬ್ಬರು ವಿದ್ಯಾರ್ಥಿಗಳಿಗೆ ತಲಾ 1 ಲಕ್ಷ ರೂಪಾಯಿಗಳ ಪ್ರೋತ್ಸಾಹಧನ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.