ಮಂಗಳೂರು: ಕೋವಿಡ್ ಸೋಂಕು ತಗುಲಿ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖನಾಗಿ ಮನೆ ಸೇರಿರುವ ತಬ್ಲಿಘಿಯೊಬ್ಬನ ಮನದಾಳದ ಮಾತಿನ ವಿಡಿಯೋವನ್ನು ಮಂಗಳೂರು ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಟ್ವೀಟ್ ಮಾಡಿದ್ದಾರೆ.
ಈ ಟ್ವೀಟ್ ಅನ್ನು ಡಿಜಿಪಿಯವರು ರೀಟ್ವೀಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಸೋಂಕು ಪೀಡಿತನಾಗಿ ಗುಣಮುಖನಾಗಿರುವ ವ್ಯಕ್ತಿ ಬಾವೋದ್ವೇಗಕ್ಕೆ ಒಳಗಾಗಿ ಮಾತನಾಡಿದ ದೃಶ್ಯವನ್ನು ನೋಡಿದರೆ ಎಂಥವರ ಮನವನ್ನೂ ಕಲಕುವಂತಿದೆ.
ಆತ ಮಾತನಾಡುತ್ತಾ, 'ಪೊಲೀಸರು ನನ್ನನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ. ವೆನ್ಲಾಕ್ ಆಸ್ಪತ್ರೆಯ ವೈದ್ಯರು, ನರ್ಸ್ಗಳು ನನಗೆ ಉತ್ತಮ ಚಿಕಿತ್ಸೆ ಒದಗಿಸಿದ್ದಾರೆ. ಬೇಕು ಬೇಕಾದ ಸಂದರ್ಭ ಬಿಸಿ ನೀರನ್ನು ಒದಗಿಸಿದ್ದಾರೆ. ರಾತ್ರಿ ನಾಲ್ಕು ಗಂಟೆಗೆ ಟಾಯ್ಲೆಟ್ನಲ್ಲಿ ನೀರು ಬಂದ್ ಆಗಿರುವಾಗ ನಾನು ಹೇಳಿದ ತಕ್ಷಣ ನೀರು ಬರುವಂತೆ ಮಾಡಿದ್ದಾರೆ. ಎಲ್ಲಕ್ಕಿಂತಲೂ ಹೆಚ್ಚಾಗಿ ನನ್ನನ್ನು ಅವರು ನೋಡಿಕೊಂಡ ರೀತಿ ಕಂಡು ಕಣ್ಣಲ್ಲಿ ನೀರು ಬಂತು. ನನಗೆ ಕೇವಲ ಮುಖಕ್ಕೆ ಮಾಸ್ಕ್ ಮಾತ್ರ ಹಾಕಲಾಗುತ್ತದೆ. ಆದರೆ ಅವರು ನನ್ನ ಜೀವ ಉಳಿಸಲು ಎಷ್ಟೊಂದು ಕಷ್ಟಪಟ್ಟಿದ್ದಾರೆ. ನಾನು ಕೊರೊನಾದಿಂದ ಮೃತಪಡಬಾರದೆಂದು ಅವರು ಕಷ್ಟಪಡುವ ರೀತಿಗೆ ನಾನು ಏನೆಂದು ಹೇಳಲಿ' ಎಂದು ಆತ ಭಾವೋದ್ರೇಕರಾಗಿ ಹೇಳುವಾಗ ಕೇಳುವವರ ಕಣ್ಣಾಲಿಗಳು ತೇವವಾಗುವುದಂತೂ ನಿಜ.
ದೆಹಲಿಯ ಹಜರತ್ ನಿಜಾಮುದ್ದೀನ್ ದರ್ಗಾ ಪಕ್ಕದ ತಬ್ಲಿಘಿ ಜಮಾತ್ ಪ್ರವಚನದಲ್ಲಿ ಭಾಗವಹಿಸಿದ್ದ ಮಂಗಳೂರಿನ ತೊಕ್ಕೊಟ್ಟಿನ ಈತನಿಗೂ ಸೋಂಕು ದೃಢಗೊಂಡ ಬಳಿಕ ಈತನನ್ನು ಚಿಕಿತ್ಸೆಗಾಗಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಏಪ್ರಿಲ್ 18ರಂದು ಗುಣಮುಖನಾಗಿ ಮನೆ ಸೇರಿದ ಸಂದರ್ಭ ಭಾವೋದ್ರೇಕಗೊಂಡು ಮಾತಾಡಿರುವ ವಿಡಿಯೋವನ್ನು ಮಂಗಳೂರು ಪೊಲೀಸ್ ಆಯುಕ್ತರು ಟ್ವೀಟ್ ಮಾಡಿದ್ದಾರೆ. ಇದೀಗ ಆತ ಮೇ 1ರವರೆಗೆ ಮನೆಯಲ್ಲಿಯೇ ಕ್ವಾರೆಂಟೈನ್ನಲ್ಲಿ ಇರಲಿದ್ದಾನೆ.