ಮಂಗಳೂರು: ಆಗಸ್ಟ್ 22 ರಂದು ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮದ ಹಿನ್ನೆಲೆ ವಿಘ್ನ ನಿವಾರಕ ವಿನಾಯಕನ ಆರಾಧನೆ ವೇಳೆ ಲಕ್ಷಾಂತರ ಗಣಪನ ಮೂರ್ತಿಗಳ ವಿಸರ್ಜನೆಯಾಗಿ ಪರಿಸರಕ್ಕೆ ಹಾನಿಯಾಗುತ್ತದೆ. ಕೊರೊನಾ ಭೀತಿಯ ನಡುವೆ ಪರಿಸರಕ್ಕೆ ಪೂರಕ, ಆರೋಗ್ಯ ವರ್ಧಕ ಗಣಪನ ತಯಾರಿಕೆಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಜಾಗೃತಿ ಮೂಡಿಸುತ್ತಿದೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅರಿಶಿಣ ಗಣೇಶನ ನಿರ್ಮಾಣ ಮಾಡಲು ಜಾಗೃತಿ ಮೂಡಿಸುತ್ತಿದೆ. ಇದಕ್ಕಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವೆಬ್ಸೈಟ್ನಲ್ಲಿ ಅರಿಶಿಣ ಗಣೇಶನ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದೆ. ಅರಿಶಿಣ ಗಣೇಶನನ್ನು ಮಾಡುವುದು ಹೇಗೆ ಎಂಬ ವಿಡಿಯೋಗಳನ್ನು ಫೇಸ್ಬುಕ್ ಮತ್ತು ಮಂಡಳಿಯ ವೆಬ್ಸೈಟ್ನಲ್ಲಿ ಹಾಕಲಾಗಿದೆ. ಈ ಬಗ್ಗೆ ಕರಪತ್ರಗಳನ್ನು ಮುದ್ರಿಸಿ ಮನೆಗಳಿಗೆ ಹಂಚಲಾಗಿದೆ. ಜನರು ಮನೆಯಲ್ಲಿಯೇ ಅರಿಶಿಣದಿಂದ ಗಣೇಶನ ಮೂರ್ತಿ ತಯಾರಿಸಿ ಪೂಜಿಸಲಿ ಎಂಬ ಉದ್ದೇಶದಿಂದ ಈ ಜಾಗೃತಿ ಮೂಡಿಸಲಾಗುತ್ತಿದೆ.
ಪಿಒಪಿ ಗಣೇಶ, ಪ್ಲಾಸ್ಟಿಕ್ ಬಳಕೆ, ಪಟಾಕಿ ಸಿಡಿಸುವುದು, ಧ್ವನಿವರ್ಧಕ ಬಳಕೆ, ರಸ್ತೆಗೆ ಕಸ ಬಿಸಾಡುವ ಮೂಲಕ ಗಣೇಶನ ಹಬ್ಬದಲ್ಲಿ ಪರಿಸರ ಹಾನಿಯಾಗುತ್ತದೆ. ಆದರೆ ಅರಿಶಿಣ ಗಣೇಶ ನಿರ್ಮಾಣದಿಂದ ಪರಿಸರಕ್ಕೆ ಪೂರಕ ಮತ್ತು ಕೋವಿಡ್ ಸಂದರ್ಭದಲ್ಲಿ ಆರೋಗ್ಯ ವರ್ಧಕವಾಗಲಿದೆ ಎಂದು ಕರ್ನಾಟಕ ರಾಜ್ಯ ಮಾಲೀನ್ಯ ನಿಯಂತ್ರಣ ಮಂಡಳಿ ಅಧಿಕಾರಿ ತಿಳಿಸಿದ್ದಾರೆ.