ಮಂಗಳೂರು: ವ್ಯಕ್ತಿವೋರ್ವ ಅರಣ್ಯದಲ್ಲಿ ಮರ ಕದ್ದಿದ್ದಾನೆಂದು ಸುಬ್ರಹ್ಮಣ್ಯ ಅರಣ್ಯಾಧಿಕಾರಿಗಳು ಆತನ ಮೇಲೆ ಹಲ್ಲೆ ನಡೆಸಿದ್ದಾರೆಂಬ ಆರೋಪ ಕೇಳಿ ಬಂದಿದೆ. ಆದರೆ ಅರಣ್ಯಾಧಿಕಾರಿ ತ್ಯಾಗರಾಜನ್ ಆರೋಪವನ್ನು ಈ ತಳ್ಳಿ ಹಾಕಿದ್ದಾರೆ. ಈ ಬಗ್ಗೆ ಆರೋಪಿ ಹಾಗೂ ಕೆಲವರ ವಿರುದ್ಧ ಶೀಘ್ರದಲ್ಲೇ ಪ್ರಕರಣ ದಾಖಲಿಸುತ್ತೇವೆ ಎಂದು ಹೇಳಿದ್ದಾರೆ.
ಪ್ರಕರಣದ ಹಿನ್ನೆಲೆ: ಕೆಲ ದಿನಗಳ ಹಿಂದೆ ಅರಣ್ಯದಲ್ಲಿ ಮರ ಕಳ್ಳತನವಾಗಿದೆ ಎಂದು ನಾಲ್ಕೈದು ಜನ ಅರಣ್ಯಾಧಿಕಾರಿಗಳು ಮೇಲಾಧಿಕಾರಿಗಳಿಗೆ ಮಾಹಿತಿ ನೀಡದೆ ಐಬಿಗೆ ಕರೆದೊಯ್ದು ಲೋಕೇಶ್ ಕೊಂಬಾರ್ ಎಂಬಾತನ ಮೇಲೆ ಹಲ್ಲೆ ನಡೆಸಿ, ಖಾಲಿ ಹಾಳೆಗಳಿಗೆ ಸಹಿ ಮಾಡಿಸಿಕೊಂಡಿದ್ದಾರೆ ಎನ್ನಲಾಗ್ತಿದೆ. ಯಾವುದೇ ತನಿಖೆ ನಡೆಸದೇ ಮಾರಣಾಂತಿಕ ಹಲ್ಲೆ ನಡೆಸಿರುವುದರಿಂದ ಈಗ ಮೂತ್ರದಲ್ಲಿ ರಕ್ತ ಬರುತ್ತಿದೆ. ಅಲ್ಲದೆ ಅಂದು ತನ್ನ ಬಳಿ ಇದ್ದ 25 ಸಾವಿರ ರೂಪಾಯಿ ಹಣವನ್ನು ಅರಣ್ಯಾಧಿಕಾರಿಗಳು ಕಿತ್ತುಕೊಂಡಿದ್ದಾರೆ ಎಂದು ಹಲ್ಲೆಗೊಳಗಾದ ಲೋಕೇಶ್ ಆರೋಪಿಸಿದ್ದಾರೆ.
ಆದ್ರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಸುಬ್ರಹ್ಮಣ್ಯ ಅರಣ್ಯಾಧಿಕಾರಿ ತ್ಯಾಗರಾಜನ್ ಅವರು, ವಾರಗಳ ಹಿಂದೆ ಆರೋಪಿ ಲೋಕೇಶ್ ಅರಣ್ಯ ಇಲಾಖೆಗೆ ಸಂಬಂಧಿಸಿದ ಮರಗಳನ್ನು ಕದ್ದಿದ್ದಾನೆ. ಹೀಗಾಗಿ ನಾವು ವಶಕ್ಕೆ ಪಡೆದು ಎಫ್ಐಆರ್ ದಾಖಲಿಸಿದ್ದೆವು. ಆ ಬಳಿಕ ಆತ 25 ಸಾವಿರ ರೂಪಾಯಿ ನೀಡಿ ಬೇಲ್ ಪಡೆದುಕೊಂಡಿದ್ದ. ಆದರೆ ಈಗ ಕೆಲವರ ಕುಮ್ಮಕ್ಕಿನಿಂದ ಅರಣ್ಯಾಧಿಕಾರಿಗಳು ಹಲ್ಲೆ ಮಾಡಿದ್ದಾರೆಂದು ಹೇಳುತ್ತಿದ್ದಾನೆ. ಆದರೆ ನಾವು ವೈದ್ಯರ ಮೂಲಕ ತಪಾಸಣೆ ಮಾಡಿಸಿ, ಯಾವುದೇ ಹಲ್ಲೆಯ ಗಾಯಗಳಿಲ್ಲ ಎಂಬ ದಾಖಲೆ ಪಡೆದಿದ್ದೇವೆ. ಈ ಬಗ್ಗೆ ಆರೋಪಿ ಮತ್ತು ಅವನ ಹಿಂದಿರುವವರ ವಿರುದ್ಧ ಪ್ರಕರಣ ದಾಖಲಿಸುತ್ತೇವೆ ಎಂದು ತಿಳಿಸಿದ್ದಾರೆ.