ಮಂಗಳೂರು: ಕೊರೊನಾ ಸೋಂಕು ಹರಡದಂತೆ ತಡೆಗಟ್ಟಲು ಆಸ್ಪತ್ರೆಗಳ ಕೊರತೆಯಿರೋದ್ರಿಂದ ಭಾರತೀಯ ರೈಲ್ವೆ ಇಲಾಖೆಯ ರೈಲು ಬೋಗಿಗಳನ್ನೇ ಐಸೊಲೇಷನ್ ವಾರ್ಡ್‌ಗಳಾಗಿ ಪರಿವರ್ತಿಸುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ಜಿಲ್ಲೆಯ ಗಡಿ ಭಾಗದಲ್ಲಿರುವ ಕಾಸರಗೋಡು ನಿವಾಸಿಗಳು ವೈದ್ಯಕೀಯ ಸೇವೆಗೆ ಮಂಗಳೂರನ್ನೇ ಆಶ್ರಯಿಸುತ್ತಿದ್ದಾರೆ. ಕಾಸರಗೋಡು ಮೂಲದ ಕೊರೊನಾ ಸೋಂಕಿತರು ಕೂಡ ಇಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಇತ್ತೀಚಿಗೆ ಕಾಸರಗೋಡಿನ ಎಲ್ಲಾ ಗಡಿ ರಸ್ತೆಗಳನ್ನೂ ಮುಚ್ಚಲಾಗಿದೆ. ಇದರ ವಿರುದ್ಧ ಕೇರಳ ಸಿಎಂ ಪ್ರಧಾನಿಗೆ ಪತ್ರ ಕೂಡ ಬರೆದಿದ್ದಾರೆ. ಈ ಎಲ್ಲ ವಿವಾದಕ್ಕೆ ಪರಿಹಾರ ಎನ್ನುವ ರೂಪದಲ್ಲಿ ರೈಲು ಆಸ್ಪತ್ರೆ ಮಂಗಳೂರಿಗೆ ಬರಲಿದೆ.
ರಾಜ್ಯದಲ್ಲಿ ಕೊರೊನಾ ವೈರಸ್ ಹಬ್ಬುವ ಹಿನ್ನೆಲೆಯಲ್ಲಿ ದಕ್ಷಿಣ ರೈಲ್ವೆ ಸೇರಿದಂತೆ ಎಲ್ಲಾ ವಿಭಾಗಗಳಿಗೆ ರೈಲ್ವೆ ಮಂಡಳಿ ಸುತ್ತೋಲೆ ರವಾನಿಸಿದೆ. ಪ್ಯಾರಾ ಮೆಡಿಕಲ್ ಸಿಬ್ಬಂದಿ ಹಾಗೂ ತರಬೇತಿ ಹೊಂದಿದ ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸುವಂತೆ ರೈಲ್ವೆ ಮುಖ್ಯ ಆರೋಗ್ಯ ಅಧಿಕಾರಿ ಸೂಚನೆ ನೀಡಿದ್ದಾರೆ.