ಮಂಗಳೂರು : ಕೊರೊನಾದಿಂದ ಪ್ರವಾಸೋದ್ಯಮ ಮೇಲೆ ದೊಡ್ಡ ಹೊಡೆತ ಬಿದ್ದಿದೆ. ಅನ್ಲಾಕ್ ಬಳಿಕವೂ ಪ್ರವಾಸಿ ತಾಣಗಳು ಬಿಕೋ ಎನ್ನುತ್ತಿವೆ. ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ಪಣಂಬೂರು ಬೀಚ್ ಚೇತರಿಕೆಯತ್ತ ಹೆಜ್ಜೆ ಹಾಕಿದೆ.
ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ, ಪಣಂಬೂರು ಬೀಚ್, ಸೋಮೇಶ್ವರ ಬೀಚ್, ಉಲ್ಲಾಳ್ ಬೀಚ್, ಧರ್ಮಸ್ಥಳ, ದುರ್ಗಾ ಪರಮೇಶ್ವರಿ ದೇವಸ್ಥಾನ, ಪಿಳಿಕುಲ ನಿಸರ್ಗ ಧಾಮ ಸೇರಿ ಹಲವು ಪ್ರಮುಖ ಪ್ರವಾಸಿ ತಾಣಗಳಿವೆ. ಅನ್ಲಾಕ್ ಬಳಿಕ ಪ್ರವಾಸಿಗರಿಗೆ ಅವಕಾಶ ನೀಡಲಾಗಿದ್ದರೂ ಷರತ್ತುಗಳನ್ನು ವಿಧಿಸಲಾಗಿದೆ.
ಮೊದಲಿನಂತೆ ಪ್ರವಾಸಿಗರು ಇಲ್ಲ. ಆದರೆ, ಪ್ರವಾಸಿಗರನ್ನು ನಂಬಿ ಜೀವನ ಸಾಗಿಸುತ್ತಿದ್ದ ಕಡಲತೀರದ ವ್ಯಾಪಾರಿಗಳ ಮೊಗದಲ್ಲಿ ಮಂದಹಾಸ ಮೂಡಿಲ್ಲ. ಗೋಬಿ, ಪಾಪ್ ಕಾರ್ನ್, ಕಬ್ಬಿನ ಹಾಲು, ಐಸ್ ಕ್ರೀಂ, ಸಮುದ್ರ ತಿನಿಸು ಅಂಗಡಿಗಳ ಖುರ್ಚಿಗಳು ಖಾಲಿ ಖಾಲಿ ಕಾಣುತ್ತಿವೆ.
ಕೊರೊನಾ ಭೀತಿಯಿಂದ ಪ್ರವಾಸಿಗರು ತಾಣಗಳ ಬಳಿ ತಿಂಡಿ ತಿನಿಸು ಖರೀದಿಗೆ ಅಷ್ಟಾಗಿ ಆಸಕ್ತಿ ತೋರುತ್ತಿಲ್ಲ. ಹೀಗಾದರೆ, ಜೀವನ ನಡೆಸುವುದು ಕಷ್ಟವಾಗಲಿದೆ ಎಂದು ಅಳಲು ತೋಡಿಕೊಳ್ಳುತ್ತಾರೆ ವ್ಯಾಪಾರಿಗಳು. ಇದು ಬೀಚ್ನ ಸಮಸ್ಯೆಗಳಷ್ಟೇ ಅಲ್ಲ, ಜಿಲ್ಲೆಯ ಎಲ್ಲಾ ಪ್ರವಾಸಿ ತಾಣಗಳಲ್ಲೂ ಇದೇ ಸ್ಥಿತಿ.