ಮಂಗಳೂರು: ರಾಜ್ಯವನ್ನೇ ತಲ್ಲಣಗೊಳಿಸಿರುವ ಮಂಗಳೂರು ಹಿಂಸಾಚಾರ ಪ್ರಕರಣ ಸೂಕ್ಷ್ಮತೆಯನ್ನು ಪಡೆದುಕೊಳ್ಳುತ್ತಿದೆ.
ಗುರುವಾರ ಪ್ರತಿಭಟನೆ ವೇಳೆ ಮೃತಪಟ್ಟವರ ಅಂತ್ಯಕ್ರಿಯೆ ಇಂದು ನೆರವೇರಿದ್ದು, ಪ್ರತಿಭಟನೆಯ ಕಾವು ಹಾಗೂ ಹೋರಾಟಗಾರರ ಮನಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಏನಾದರೂ ವಿಷಯಗಳನ್ನು ವೈರಲ್ ಮಾಡಿ ಕೋಮು ಪ್ರಚೋದನೆ ಮಾಡಬಹುದು ಎಂಬ ಉದ್ದೇಶದಿಂದ ಈಗಾಗಲೇ ಇಂಟರ್ನೆಟ್ ಬಂದ್ ಮಾಡಲಾಗಿದೆ.
ಘಟನೆ ಹಿನ್ನೆಲೆ ನಾಳೆಯೂ ಕೂಡ ಶಾಲೆ, ಕಾಲೇಜು, ಬಾರ್ ಆ್ಯಂಡ್ ರೆಸ್ಟೋರೆಂಟ್ಸ್, ವೈನ್ ಶಾಪ್ಗಳನ್ನು ಬಂದ್ ಮಾಡುವಂತೆ ಜಿಲ್ಲಾಧಿಕಾರಿ ಸಿಂಧು ಬಿ ರೂಪೇಶ್ ಆದೇಶ ಹೊರಡಿಸಿದ್ದಾರೆ.
ಕಾಂಗ್ರೆಸ್ ನಿಯೋಗವನ್ನೂ ಬಿಡದ ಪೊಲೀಸರು:
ಬೆಂಗಳೂರಿನಿಂದ ಕಾಂಗ್ರೆಸ್ ನಿಯೋಗ ಮಂಗಳೂರಿನ ಸ್ಥಿತಿ ಗತಿ ವಿಚಾರಿಸಲು ಹಾಗೂ ಮೃತಪಟ್ಟವರ ಕುಟುಂಬಕ್ಕೆ ಸಾಂತ್ವಾನ ತುಂಬಲು ಆಗಮಿಸಿತ್ತಾದರೂ ಅವರನ್ನು ಪೊಲೀಸರು ವಿಮಾನ ನಿಲ್ದಾಣದಿಂದ ಹೊರಗಡೆ ಬಿಡಲೇ ಇಲ್ಲ. ಬೆಳಗ್ಗೆ 12 ಗಂಟೆಗೆ ಬಂದ ನಿಯೋಗ ಇದುವರೆಗೂ ವಿಮಾನನಿಲ್ದಾಣದಲ್ಲೇ ಇದ್ದು ಈಗ ಬೆಂಗಳೂರಿಗೆ ವಾಪಸ್ ಆಗಿದೆ.