ಮಂಗಳೂರು: ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣದ ಕುರಿತು ವಾಟ್ಸಪ್ ಸ್ಟೇಟಸ್ ಹಾಕಿಕೊಂಡಿದ್ದ ಕಾರಣಕ್ಕೆ ತಂಡವೊಂದು ಯುವಕನ ಮನೆಗೆ ನುಗ್ಗಿ ದಾಳಿ ಮಾಡಲು ಯತ್ನಿಸಿದ್ದ ಆರೋಪದಡಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ನೆಕ್ಕಿಲಾಡಿ ನಿವಾಸಿಗಳಾದ ನೌಷಾದ್, ಮಹಮ್ಮದ್ ಫಯಾಝ್ ಹಾಗೂ ರಫೀಕ್ ಬಂಧಿತರು. ಮಾ.2 ರಂದು ರಾತ್ರಿ 11 ಗಂಟೆ ಸುಮಾರಿಗೆ ಉಬೈದ್ ಹಾಗೂ ಐದಾರು ಮಂದಿ ಸೇರಿ ಉಪ್ಪಿನಂಗಡಿ ಆದರ್ಶನಗರ ನಿವಾಸಿ ಮುಕುಂದ ಎಂಬುವರ ಮನೆ ಮೇಲೆ ದಾಳಿಗೆ ಯತ್ನಿಸಿದ್ದಾರೆ. ಈ ವೇಳೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಅವರ ಕಾರಿಗೆ ಹಾನಿ ಮಾಡಿದ್ದಾರೆ ಎಂದು ದೂರು ದಾಖಲಾಗಿತ್ತು.
ಇದನ್ನೂ ಓದಿ: ರಾಮನ ಬಗ್ಗೆ ಪೋಸ್ಟ್ ಹಾಕಿದ ಯುವಕನ ಮೇಲೆ ಅನ್ಯ ಧರ್ಮೀಯ ಯುವಕರಿಂದ ಹಲ್ಲೆ ಯತ್ನ
ಈ ಸಂಬಂಧ ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್ ಮಾಹಿತಿ ನೀಡಿ, ಒಂದೂವರೆ ತಿಂಗಳ ಹಿಂದೆ ಮುಕುಂದ ಹಾಗೂ ಉಬೈದ್ ಮಧ್ಯೆ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ಸ್ಟೇಟಸ್ ಹಾಕಿಕೊಂಡಿರುವ ಕಾರಣಕ್ಕೆ ವಾದ ನಡೆದಿತ್ತು. ಇದೇ ಕಾರಣಕ್ಕೆ ಉಬೈದ್ ತಂಡ ಕಟ್ಟಿಕೊಂಡು ಬಂದು ದಾಂದಲೆ ನಡೆಸಿದ್ದಾನೆಂದು ದೂರು ದಾಖಲಾಗಿದೆ. ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳನ್ನು ಶೀಘ್ರದಲ್ಲಿ ವಶಪಡಿಸಿಕೊಳ್ಳಲಾಗುತ್ತದೆ ಎಂದು ಹೇಳಿದರು.