ಮಂಗಳೂರು(ದ.ಕ): ಪುತ್ತೂರು ನಗರ ಠಾಣಾ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಬಂಧಿಸಲ್ಪಟ್ಟಿರುವ ಮೂವರು ಅಂತಾರಾಜ್ಯ ಗಾಂಜಾ ಸಾಗಣೆಯ ಆರೋಪಿಗಳನ್ನು ನ್ಯಾಯಾಲಯವು ಪೊಲೀಸರ ವಶಕ್ಕೆ ಒಪ್ಪಿಸಿದೆ.
ಬಂಧಿತ ಆರೋಪಿಗಳನ್ನು ಆ.12ರಂದು ನ್ಯಾಯಾಲಯಕ್ಕೆ ಹಾಜರುಪಡಿಸಬೇಕಾಗಿತ್ತಾದರೂ ಕೋವಿಡ್ ಹಿನ್ನೆಲೆ ಆ್ಯಂಟಿಜನ್ ಪರೀಕ್ಷೆಗೊಳಪಡಿಸಿ ಬಳಿಕ ಠಾಣೆಯಿಂದಲೇ ನ್ಯಾಯಾಧೀಶರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಆರೋಪಿಗಳನ್ನು ಹಾಜರುಪಡಿಸಲಾಯಿತು. ಈ ಪ್ರಕರಣದ ಕುರಿತು ಇನ್ನೂ ಹೆಚ್ಚಿನ ತನಿಖೆ ಅಗತ್ಯವಿರುವುದರಿಂದ ಆರೋಪಿಗಳನ್ನು ತಮ್ಮ ಕಸ್ಟಡಿಗೆ ನೀಡಬೇಕೆಂದು ಪೊಲೀಸರು ನ್ಯಾಯಾಧೀಶರಿಗೆ ಮನವಿ ಮಾಡಿದರು.
ಈ ಮನವಿಯನ್ನು ಪುರಸ್ಕರಿಸಿದ ನ್ಯಾಯಾಧೀಶರು ಆರೋಪಿಗಳನ್ನು ಹೆಚ್ಚಿನ ತನಿಖೆಗಾಗಿ 4 ದಿನದ ಮಟ್ಟಿಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶ ಹೊರಡಿಸಿದರು.
ಪ್ರಕರಣದ ಹಿನ್ನೆಲೆ:
ಕೆದಿಲ ಗ್ರಾಮದ ಪಾಟ್ರಕೋಡಿ ಎಂಬಲ್ಲಿಗೆ ಅಕ್ರಮವಾಗಿ ಅಪಾರ ಪ್ರಮಾಣದ ಗಾಂಜಾ ಸಾಗಿಸುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ ವೇಳೆ ಗಾಂಜಾ ಮಾರಾಟ ಜಾಲ ಪತ್ತೆಯಾಗಿತ್ತು. ಜೋಳದ ಲೋಡ್ ಸಾಗಿಸುತ್ತಿದ್ದ ಪಿಕಪ್ ಮತ್ತು ಅದಕ್ಕೆ ಬೆಂಗಾವಲಾಗಿ ಬರುತ್ತಿದ್ದ ಕಾರಲ್ಲಿ ಗಾಂಜಾ ಸಾಗಣೆದಾರರನ್ನು ಪತ್ತೆ ಮಾಡಿದ್ದ ಪೊಲೀಸರು 175 ಕೆ..ಜಿ ಗಾಂಜಾ ಸಮೇತ 2 ವಾಹನಗಳನ್ನು ವಶಪಡಿಸಿಕೊಂಡಿದ್ದರು.
ಆರೋಪಿಗಳಾದ ಕಾಸರಗೋಡು ಮಂಜೇಶ್ವರ ಮಿಜಾ ಆಯಿಷಾ ಮಂಜಿಲ್ ದೂರ್ಮಕ್ಕಾಡ್ ನಿವಾಸಿ ಇಬ್ರಾಹಿಂ ಎಂಬುವರ ಪುತ್ರ ಇಬ್ರಾಹಿಂ ಯಾನೆ ಅರ್ಷದ್ ಯಾನೆ ಅಚ್ಚು(26), ಮಂಜೇಶ್ವರ ಹೊಸಂಗಡಿ ಮಿಜಿರ್‌ಪಳ್ಳ ಮನೆಯ ದಿ.ಮುಸ್ತಾಫರ ಪುತ್ರ ಮೊಹಮ್ಮದ್ ಶಫಿಕ್(31), ವಿಟ್ಲ ಕನ್ಯಾನ ಗ್ರಾಮದ ಮಡಕುಂಜ ನಿವಾಸಿ ಅಬ್ದುಲ್ಲಾ ಎಂಬುವರ ಪುತ್ರ ಖಲಂದರ್ ಶಫಿ(26) ಎಂಬುವರನ್ನು ಪೊಲೀಸರು ಬಂಧಿಸಿದ್ದರು.
ವಶಪಡಿಸಿಕೊಳ್ಳಲಾದ 175 ಕೆ.ಜಿ ಗಾಂಜಾದ ಮೌಲ್ಯ ಸುಮಾರು 1 ಲಕ್ಷದ 75 ಸಾವಿರ ರೂಪಾಯಿಗಳು ಎಂದು ಅಂದಾಜಿಸಲಾಗಿದೆ.