ಉಪ್ಪಿನಂಗಡಿ: ಬೆಂಕಿ ಬಿದ್ದ ಮನೆಗೆ ಸಹಾಯದ ನೆಪದಲ್ಲಿ ಹೋಗಿದ್ದ ವ್ಯಕ್ತಿ ಅದೇ ಮನೆಯಿಂದ ಚಿನ್ನಾಭರಣ ಎಗರಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ನಿವಾಸಿ ಶಿವಪ್ರಸಾದ್ (38) ಬಂಧಿತ ಆರೋಪಿ. ಈತ ಸ್ಥಳೀಯ ಬಾರ್ ಉದ್ಯೋಗಿ ಎಂದು ತಿಳಿದುಬಂದಿದೆ.
ಮೇ ತಿಂಗಳ 16 ರಂದು ಬೆಳ್ತಂಗಡಿ ತಾಲೂಕು ಕಣಿಯೂರು ಗ್ರಾಮದ ಮಲೆಂಗಲ್ ಎಂಬಲ್ಲಿನ ಆನಂದ ಮೂಲ್ಯ ಎಂಬವರ ಮನೆಗೆ ಆಕಸ್ಮಿಕ ಬೆಂಕಿ ತಗುಲಿದ್ದು, ಈ ಸಮಯದಲ್ಲಿ ಆರೋಪಿ ಶಿವಪ್ರಸಾದ್‌ಸಹಿತ ಸ್ಥಳೀಯರು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದರು. ಆ ವೇಳೆಗಾಗಲೇ ಮನೆಯಲ್ಲಿದ್ದ ಬಹುತೇಕ ಬಟ್ಟೆಬರೆ ಸುಟ್ಟು ಕರಕಲಾಗಿತ್ತು. ಕಪಾಟಿನಲ್ಲಿ ಚಿನ್ನ ಇಟ್ಟ ಬಾಕ್ಸ್ ಮತ್ತು ದಾಖಲೆ ಪತ್ರಗಳು ಯಥಾಸ್ಥಿತಿಯಲ್ಲಿದ್ದವು.
ಇದರಿಂದ ಕೊಂಚ ನೆಮ್ಮದಿಯಾಗಿದ್ದ ಮನೆಯವರು ಮೇ.30 ರಂದು ಎಲ್ಲಾ ವಸ್ತುಗಳನ್ನು ಜೋಡಿಸಿಡುವಾಗ ಚಿನ್ನ ಇಡುವ ಬಾಕ್ಸ್ನೊಳಗಿದ್ದ ವಿವಿಧ ಆಭರಣಗಳು ಸೇರಿದಂತೆ ಒಟ್ಟು 2.50 ಲಕ್ಷ ಮೌಲ್ಯದ ಚಿನ್ನಾಭರಣ ಕಳವಾಗಿರುವುದು ಕಂಡುಬಂದಿದೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ವಿಳಂಬವಾಗಿ ದೂರು ನೀಡಲಾಗಿತ್ತು.
ಇದನ್ನೂ ಓದಿ: ಮನೆಪಾಠ ಮಾಡದ್ದಕ್ಕೆ ಬಾಲಕಿಯನ್ನು ಕೈ-ಕಾಲು ಕಟ್ಟಿ ಛಾವಣಿ ಮೇಲೆ ಬಿಸಾಡಿದ ಪೋಷಕರು!