ಬಂಟ್ವಾಳ : ಮದುವೆ ಹಾಲ್ನಲ್ಲಿ ಮಹಿಳೆಯರ ಬ್ಯಾಗ್, ಮಕ್ಕಳ ಕತ್ತಿನಿಂದ ಚಿನ್ನಾಭರಣ ಎಗರಿಸುತ್ತಿದ್ದ ಆರೋಪದ ಮೇಲೆ ಫಾತಿಮಾ ಶಹನಾಝ್ ಎಂಬುವರನ್ನು ಬಂಟ್ವಾಳ ನಗರ ಠಾಣೆಯ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ಸುಮಾರು 234 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಇತ್ತೀಚೆಗೆ ಮದುವೆ ಹಾಲ್ಗಳಲ್ಲಿ ಮಹಿಳೆಯರ ಬ್ಯಾಗ್, ಚಿಕ್ಕ ಮಕ್ಕಳ ಕತ್ತಿನಿಂದ ಚಿನ್ನದ ಸರ ಕಳವಾಗುತ್ತಿರುವ ಬಗ್ಗೆ ಹಾಲ್ನ ಸಿಸಿ ಟಿವಿಯಲ್ಲಿ ಸೆರೆಯಾಗಿರುವ ದೃಶ್ಯ ಆಧರಿಸಿ ಹಾಲ್ ಮಾಲೀಕರು ಬಂಟ್ವಾಳ ನಗರ ಮತ್ತು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ಗುರುವಾರ ಪಾಣೆ ಮಂಗಳೂರಿನ ಆಡಿಟೋರಿಯಂವೊಂದರಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಮಹಿಳೆಯೊಬ್ಬರು ಹೆಣ್ಣುಮಗುವೊಂದನ್ನು ಪುಸಲಾಯಿಸಿ ಆ ಮಗುವಿನ ಕತ್ತಿನಿಂದ ಚಿನ್ನದ ಸರ ಕಸಿಯಲು ಯತ್ನಿಸಿದಾಗ ಮಗು ಕಿರುಚಿತ್ತು.
ತಕ್ಷಣ ಅಲ್ಲಿ ಸೇರಿದ್ದವರು ಮಹಿಳೆಯನ್ನು ಹಿಡಿದು ಬಂಟ್ವಾಳ ನಗರ ಠಾಣೆಯ ಪೊಲೀಸರಿಗೆ ಒಪ್ಪಿಸಿದ್ದರು. ಬಳಿಕ ಅಪರಾಧ ವಿಭಾಗದ ಎಸ್‌ಐ ಕಲೈಮಾರ್ ಮತ್ತು ಸಿಬ್ಬಂದಿ ಈ ಮಹಿಳೆಯ ವಿಚಾರಣೆ ನಡೆಸಿದಾಗ ಹಲವು ಮದುವೆ ಹಾಲ್ನಲ್ಲಿ ಈ ಕೃತ್ಯ ನಡೆಸಿರುವುದನ್ನು ಬಾಯಿಬಿಟ್ಟಿದ್ದಳು ಎಂದು ತಿಳಿದು ಬಂದಿದೆ.
ಈ ಸುದ್ದಿಯನ್ನೂ ಓದಿ: ಹಣದ ವಿಚಾರಕ್ಕೆ ಹತ್ಯೆಮಾಡಿ ಬೆಂಕಿ ಹಚ್ಚಿ ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದ ಇಬ್ಬರ ಬಂಧನ
ಕಳವು ಮಾಡಿದ ಚಿನ್ನಾಭರಣವನ್ನು ಕರಗಿಸಿ ಹೊಸ ರೂಪ ನೀಡಿರುವ ಸುಮಾರು 234 ಗ್ರಾಂ ಚಿನ್ನವನ್ನು ಆರೋಪಿ ಫಾತಿಮಾಳಿಂದ ವಶಪಡಿಸಿಕೊಳ್ಳಲಾಗಿದೆ. ಉಳಿದಂತೆ ಒಂದಷ್ಟು ಚಿನ್ನವನ್ನು ಮಾರಾಟ ಮಾಡಿ ಬಂದಿರುವ ಹಣವನ್ನು ತನ್ನ ಬ್ಯಾಂಕ್ ಖಾತೆಯಲ್ಲಿ ಜಮಾ ಮಾಡಿದ್ದಾಳೆಂದು ತಿಳಿದು ಬಂದಿದೆ.
ಕಳೆದ 10 ವರ್ಷಗಳಿಂದ ಆಕೆ ಈ ಕೃತ್ಯದಲ್ಲಿ ತೊಡಗಿದ್ದಾಳೆ ಎಂದು ಪೊಲೀಸ್ ತನಿಖೆಯ ವೇಳೆ ತಿಳಿದು ಬಂದಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಜಿಲ್ಲಾ ಎಸ್ಪಿ ಲಕ್ಷ್ಮಿ ನಾರಾಯಣ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ವೆಲೆಂಟಿನ್ ಡಿಸೋಜ, ಇನ್ಸ್‌ಪೆಕ್ಟರ್ ನಾಗರಾಜ್ ಅವರ ನಿರ್ದೇಶನದಂತೆ ಅಪರಾಧ ವಿಭಾಗದ ಎಸ್‌ಐ ಕಲೈಮಾರ್ ಮತ್ತು ಅವರ ತಂಡ ಮುಂದಿನ ತನಿಖೆ ನಡೆಸುತ್ತಿದೆ.