ಮಂಗಳೂರು: ಕರ್ನಾಟಕದಲ್ಲಿ ಬಹಳಷ್ಟು ವಕ್ಫ್ ಜಾಗಗಳು ಕಬಳಿಕೆಯಾಗಿವೆ. ಇದರಲ್ಲಿ 125 ವರ್ಷಗಳ ಇತಿಹಾಸವಿರುವ ಕಾಂಗ್ರೆಸ್ ಪಕ್ಷದ ನೇತಾರರ ಶಾಮೀಲಾತಿಯಿದೆ ಎಂದು ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಹೇಳಿದರು.
ವಕ್ಫ್ ಆಸ್ತಿಯನ್ನು ಕಬಳಿಸಿ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಿರುವವರ ವಿರುದ್ಧ ಎಸ್‌ಡಿಪಿಐ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ನಡೆದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಅವರು, ರಿಯಲ್ ಎಸ್ಟೇಟ್ ಮಾಲೀಕರು ಹಿಂದೆ ಯಾವ ಮುಸ್ಲಿಂ ನಾಯಕರೊಂದಿಗೆ, ಅಧಿಕಾರಿಗಳೊಂದಿಗೆ ಮಾತನಾಡಿದ್ದಾರೋ, ಆ ರೀತಿಯ ಮಾತು ಈಗ ನಡೆಯುವುದಿಲ್ಲ. ಎಸ್‌ಡಿಪಿಐ ಹೋರಾಟಕ್ಕೆ ಸಜ್ಜಾಗಿ ನಿಂತಿದೆ ಎಂದು ನೀವು ಮರೆಯಬಾರದು ಎಂದು ಜಿಲ್ಲಾಧ್ಯಕ್ಷ ಅಥಾವುಲ್ಲಾ ಹೇಳಿದರು.
ಮಂಗಳೂರಿನ ಬಂದರ್ ಪ್ರದೇಶದಲ್ಲಿರುವ ಕಚ್ಚಿ ಮಸೀದಿಗೆ ಒಳಪಟ್ಟ ವಕ್ಫ್ಗೆ ನೋಂದಾಯಿತ 63 ಸೆಂಟ್ಸ್ ಜಾಗದ ಕಬಳಿಕೆ ಎಂದು ನಮಗೆ ತಿಳಿದು ಬಂದಿದೆ. 1968ರಲ್ಲಿ ನಡೆದಿರುವ ಸರ್ವೇ ದಾಖಲು ಪ್ರಕಾರ ಈ ಅಂಶ ಸ್ಪಷ್ಟವಾಗಿದೆ. ಇದರ ಹಿಂದಿರುವುದು ನಯೀಮ್ ಪಾಟೀಲ್ ಎಂಬ ವಂಚಕ. ಈ ಸ್ಥಳವನ್ನು ಗಂಗಾ ಯಮುನಾ ಎಂಬ ರಿಯಲ್ ಎಸ್ಟೇಟ್ ಸಂಸ್ಥೆಗೆ ನೀಡಿದ್ದಾರೆ. ಇನ್ನು, ವಿನಿತಾ, ಅರವಿಂದಾಕ್ಷ, ಜಗದೀಶ್ ಮಿಜಾರ್, ಪುರುಷೋತ್ತಮ ಶೆಟ್ಟಿ, ಕೃಪಾಲಿನಿ ಉಳ್ಳಾಲ ಹಾಗೂ ರವಿಶಂಕರ್ ಮಿಜಾರ್ ಎಂಬುವರು ಇದರಲ್ಲಿ ಶಾಮೀಲಾಗಿ, ನಯೀಮ್ ಪಾಟೀಲ್ರೊಂದಿಗೆ ಸೇರಿ ಒಪ್ಪಂದ ಮಾಡಿಕೊಂಡು ನೋ ಆಬ್ಜೆಕ್ಷನ್ ಸರ್ಟಿಫಿಕೇಟ್ ಪಡೆಯುವುದರ ಮೂಲಕ ಮುಸ್ಲಿಂ ವಕ್ಫ್ಗೆ ಸೇರಿದ ಆಸ್ತಿ ಕಬಳಿಸಿದ್ದಾರೆ ಎಂದು ಅಥಾವುಲ್ಲಾ ಜೋಕಟ್ಟೆ ಆರೋಪಿಸಿದ್ದಾರೆ.
2018ರಲ್ಲಿ ಈ ವ್ಯಕ್ತಿಗಳ ಮೇಲೆ ದಕ್ಷಿಣ ಕನ್ನಡ ಜಿಲ್ಲಾ ಸಹಾಯಕ ಆಯುಕ್ತರು ವಕ್ಫ್ಗೆ ಸಂಬಂಧಿಸಿರುವ ಈ ಜಾಗದಲ್ಲಿ ಯಾವುದೇ ಕಟ್ಟಡ ನಿರ್ಮಾಣ ಮಾಡಬಾರದು ಎಂದು ನೋಟಿಸ್ ನೀಡಿದ್ದರು.ಗಂಗಾ ಯಮುನಾ ರಿಯಲ್ ಎಸ್ಟೇಟ್ ಇರುವ ಆ ಸ್ಥಳ ಮುಸ್ಲಿಂ ವಕ್ಫ್ಗೆ ಸಂಬಂಧಪಟ್ಟ ಆಸ್ತಿ. ಅದಕ್ಕಾಗಿ ನಾವು ಸದಾ ಹೋರಾಟಕ್ಕೆ ಸಿದ್ಧರಿದ್ದೇವೆ. ನಮ್ಮ ಹೋರಾಟ ತೀವ್ರಗೊಳ್ಳುವ ಮೊದಲೇ ನೀವು ಸ್ವತಃ ಆ ಸ್ಥಳವನ್ನು ಬಿಟ್ಟುಕೊಡಬೇಕು ಎಂದು ಅಥಾವುಲ್ಲಾ ಜೋಕಟ್ಟೆ ಆಗ್ರಹಿಸಿದ್ದಾರೆ.