ಮಂಗಳೂರು: ನಗರದ ಮಾರ್ನಮಿಕಟ್ಟೆಯ ಶ್ರೀಮತಿ ಶೆಟ್ಟಿ ಎಂಬ ಮಹಿಳೆಯನ್ನು ಹತ್ಯೆ ಮಾಡಿ ಅವರ ರುಂಡ, ದೇಹ ಬೇರ್ಪಡಿಸಿ ನಗರದ ಮೂರು ಕಡೆ ಬಿಸಾಡಿ ದುಷ್ಕೃತ್ಯವೆಸಗಿದ್ದ ಆರೋಪಿಗಳನ್ನು ಮೂರೇ ದಿನಗಳಲ್ಲಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಭಾನುವಾರ ಬೆಳಗ್ಗೆ ಹೆಲ್ಮೆಟ್ನೊಳಗೆ ಇರಿಸಿದ್ದ ಮಹಿಳೆಯ ರುಂಡವೊಂದು ಸಿಕ್ಕಿತ್ತು. ಬಳಿಕ ನಂದಿಗುಡ್ಡೆಯಲ್ಲಿ ಅವರ ದೇಹದ ಕೆಲವು ಭಾಗಗಳು ಸಿಕ್ಕಿದ್ದವು. ಇದು ಮಾರ್ನಮಿಕಟ್ಟೆಯ ಶ್ರೀಮತಿ ಶೆಟ್ಟಿ ಎಂದು ಪೊಲೀಸರು ಗುರುತಿಸಿದ್ದರು. ಹಿಂದೆಂದೂ ನಡೆದಿರದ ಇಂತಹ ಕೊಲೆ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದ ಪೊಲೀಸರು ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.
ವೆಲೆನ್ಸಿಯ ಸೂಟರ್ ಪೇಟೆಯ ಜೋನಸ್ ಜೂಲಿನ್ ಸ್ಯಾಮ್ಸನ್ (36) ಮತ್ತು ಆತನ ಪತ್ನಿ ವಿಕ್ಟೋರಿಯಾ ಮಥಾಯಿಸ್ (46) ಬಂಧಿತರು. ಜೋನಸ್ ಜೂಲಿನ್ ಸ್ಯಾಮ್ಸನ್ ಈ ಹಿಂದೆ ಕೂಡ ಒಂದು ಕೊಲೆ ಯತ್ನ ಪ್ರಕರಣದಲ್ಲಿ ಭಾಗಿಯಾಗಿದ್ದ. ಈತ ತನಗಿಂತ ಹತ್ತು ವರ್ಷದ ಹಿರಿಯ ಮಹಿಳೆಯನ್ನು ಮದುವೆಯಾಗಿದ್ದ. ಶ್ರೀಮತಿ ಶೆಟ್ಟಿ ಅವರಿಂದ 1 ಲಕ್ಷ ಸಾಲ ಪಡೆದಿದ್ದನಂತೆ. ಇದರಲ್ಲಿ 40 ಸಾವಿರ ವಾಪಸ್ ಕೊಟ್ಟಿದ್ದ, ಬಾಕಿ ಹಣ 60 ಸಾವಿರ ನೀಡಬೇಕಿತ್ತು.
ಮಂಗಳೂರಿನಲ್ಲಿ ಫಾಸ್ಟ್ ಪುಡ್ ವ್ಯಾಪಾರ ನಡೆಸುತ್ತಿದ್ದ ಈತ ಅದರಲ್ಲಿ ನಷ್ಟವಾಗಿ ಕಳೆದ ಒಂದು ತಿಂಗಳಿನಿಂದ ವ್ಯಾಪಾರ ಬಂದ್ ನಿಲ್ಲಿಸಿದ್ದ. ಹಾಗಾಗಿ ಹಣದ ಮುಗ್ಗಟ್ಟಿನಲ್ಲಿದ್ದ ಈತನಿಗೆ ಶ್ರೀಮತಿ ಶೆಟ್ಟಿ ಪದೇ ಪದೇ ತಾನು ನೀಡಿದ್ದ ಸಾಲದ ಹಣ ವಾಪಸ್ ಕೇಳುತ್ತಿದ್ದರಂತೆ. ಶನಿವಾರ ಬೆಳಗ್ಗೆ ಶ್ರೀಮತಿ ಶೆಟ್ಟಿ ಸಾಲದ ಹಣ ವಾಪಸ್ ಕೇಳಲು ಹೋದಾಗ ಜೋನಸ್ ಜೂಲಿನ್ ಸ್ಯಾಮ್ಸನ್ ಮಾರಾಕಾಸ್ತ್ರದಿಂದ ಅವರ ಮೇಲೆ ಹಲ್ಲೆ ಮಾಡಿ ಹತ್ಯೆಗೈದಿದ್ದಾನೆ. ಬಳಿಕ ದೇಹವನ್ನು ತುಂಡು ಮಾಡಿ ಮೂರು ಕಡೆ ಎಸೆದಿದ್ದನಂತೆ.
ಪೊಲೀಸರನ್ನು ಕಂಡು ಆರೋಪಿ ಆತ್ಮಹತ್ಯೆಗೆ ಯತ್ನ
ಈತ ಕೊಲೆ ಮಾಡಿರುವ ವಿಚಾರ ಪೊಲೀಸರಿಗೆ ತಿಳಿದ ಬಳಿಕ ಆತನನ್ನು ಬಂಧಿಸಲು ಪೊಲೀಸರು ಮನೆಗೆ ತೆರಳಿದ್ದರು. ಅದನ್ನು ದೂರದಿಂದಲೇ ಕಂಡ ಸ್ಯಾಮ್ಸನ್ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಅಲ್ಲದೆ, ಗಾಯ ಮಾಡಿಕೊಂಡಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಿ ಬಂಧಿಸಲಾಗಿದೆ. ಶ್ರೀಮತಿ ಶೆಟ್ಟಿ ಕೊಲೆ ಮನೆಯಲ್ಲಿ ನಡೆದಿದ್ದು, ಈ ಘಟನೆ ಸಂದರ್ಭದಲ್ಲಿ ಆತನ ಪತ್ನಿ ವಿಕ್ಟೋರಿಯಾ ಮಥಾಯಿಸ್ ಸಹ ಇದ್ದಳು. ಹೀಗಾಗಿ ಈಕೆಯನ್ನು ಸಹ ಪೊಲೀಸರು ಬಂಧಿಸಿದ್ದಾರೆ.
ಜೋನಸ್ ಜೂಲಿನ್ ಸ್ಯಾಮ್ಸನ್ ವಿರುದ್ಧ ಆತ್ಮಹತ್ಯೆ ಯತ್ನ ಪ್ರಕರಣ ಕೂಡ ದಾಖಲಿಸಲಾಗಿದೆ. ಆರೋಪಿಗಳಿಂದ ಮೃತದೇಹ ಸಾಗಿಸಲು ಉಪಯೋಗಿಸಿದ ದ್ವಿಚಕ್ರ ವಾಹನ, ಮೃತಳ 8 ಗ್ರಾಂ ಚಿನ್ನದ ಉಂಗುರ, ಒಂದು ಚಿನ್ನದ ಸರ ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದ ಪತ್ತೆ ಕಾರ್ಯದಲ್ಲಿ 30 ಜನ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು. ಪ್ರಕರಣದ ಪತ್ತೆ ಕಾರ್ಯದಲ್ಲಿ ಶ್ರಮಿಸಿದ ಅಧಿಕಾರಿ ಮತ್ತು ಸಿಬ್ಬಂದಿಗೆ ಬಹುಮಾನ ನೀಡಲಾಗುವುದು ಎಂದು ಮಂಗಳೂರು ಪೊಲೀಸ್ ಕಮೀಷನರ್ ಸಂದೀಪ್ ಪಾಟೀಲ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.