ಸುಬ್ರಹ್ಮಣ್ಯ (ದ.ಕ): ದಂಪತಿಯ ಮೇಲೆ ದಾಳಿ ಮಾಡಿ ಬಳಿಕ ಮರವೇರಿ ಕುಳಿತಿದ್ದ ಚಿರತೆಯನ್ನು ಯಶಸ್ವಿಯಾಗಿ ಅರಣ್ಯ ಇಲಾಖೆ ಸೆರೆಹಿಡಿದಿದೆ. ಸುಮಾರು 4-5 ವರ್ಷದ ಚಿರತೆ ಇದಾಗಿದ್ದು, ದಂಪತಿ ಮೇಲೆ ದಾಳಿಗೆ ಮುಂದಾಗಿ ಬಳಿಕ ಮರದಲ್ಲಿ ಕುಳಿತಿತ್ತು.
ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಗೆ ಅರವಳಿಕೆ ಚುಚ್ಚು ಮದ್ದು ನೀಡಿದ್ದರು. ಆದರೆ ಈ ವೇಳೆ ಮರದಲ್ಲಿಯೇ ಚಿರತೆ ಸಿಲುಕಿತ್ತು. ಬಳಿಕ ಮರದ ಕೆಳಗೆ ಬಲೆ ಹಾಕಿ ಮರವನ್ನು ಕಡಿದು ಚಿರತೆ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ನೆಟ್ಟಣ ಫಾರೆಸ್ಟ್ ಡಿಪೋದಲ್ಲಿ ಚಿರತೆಗೆ ಚಿಕಿತ್ಸೆ ನೀಡಲಾಗುತ್ತಿದೆ.
ಈ ಕುರಿತು ಮಾತನಾಡಿದ ಡಿಎಫ್ಒ ಕರಿಕಾಳನ್, ಚಿರತೆ ಈಗ ಆರೋಗ್ಯವಾಗಿದೆ. ಅದನ್ನು ಪಿಳಿಕುಲ ಪ್ರಾಣಿ ಸಂಗ್ರಾಹಾಲಯಕ್ಕೆ ಬಿಡಬೇಕೋ ಅಥವಾ ಅರಣ್ಯಕ್ಕೆ ಬಿಡಬೇಕೋ ಎಂಬ ಬಗ್ಗೆ ತೀರ್ಮಾನವಾಗಿಲ್ಲ ಎಂದಿದ್ದಾರೆ.
ಬೆಳ್ಳಂಬೆಳಗ್ಗೆ ದಂಪತಿ ಮೇಲೆರಗಿದ ಚಿರತೆ
ಕಡಬ ತಾಲೂಕಿನ ಕುಟ್ರುಪ್ಪಾಡಿ ಗ್ರಾಮದ ರೆಂಜಿಲಾಡಿಯ ಹೇರ ನಿವಾಸಿಗಳಾದ ಶೇಖರ ಕಾಮತ್ ಹಾಗೂ ಸೌಮ್ಯ ಕಾಮತ್ ಎಂಬುವರು ಬೆಳಗಿನ ಜಾವ ತೋಟಕ್ಕೆ ತೆರಳುವ ವೇಳೆ ಚಿರತೆ ದಾಳಿ ನಡೆಸಿತ್ತು. ತಕ್ಷಣವೇ ಇಬ್ಬರನ್ನೂ ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಪಿಳಿಕುಲದ ನುರಿತ ಶೂಟರ್ ಡಾ. ಯಶಸ್, ಸುಳ್ಯ ಎಸಿಎಫ್ ಆಸ್ಟಿನ್ ಪಿ. ಸೋನ್ಸ್, ವಲಯಾಧಿಕಾರಿಗಳಾದ ರಾಘವೇಂದ್ರ, ಮಂಜುನಾಥ್, ಇಲಾಖೆ ಸಿಬ್ಬಂದಿ ಹಾಗೂ ಕಡಬ ಪೊಲೀಸರು ಚಿರತೆ ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ರಾಜಕೀಯ ಮೇಲಾಟಕ್ಕೆ ಕಾಂಗ್ರೆಸ್ ಪರಿಷತ್ ಬಳಸಿಕೊಳ್ಳುತ್ತಿರುವುದು ಖೇದಕರ: ಪ್ರತಾಪ ಸಿಂಹ ನಾಯಕ್