ಉಳ್ಳಾಲ (ದಕ್ಷಿಣ ಕನ್ನಡ): ಸಮುದ್ರ ವಿಹಾರಕ್ಕೆಂದು ಬಂದಿದ್ದ ಐವರು ವೈದ್ಯರಲ್ಲಿ ವೈದ್ಯರೊಬ್ಬರು ಸಮುದ್ರಪಾಲಾದ ಘಟನೆ ಸೋಮೇಶ್ವರ ರುದ್ರಪಾದೆ ಸಮೀಪ ನಿನ್ನೆ ತಡರಾತ್ರಿ 11 ಗಂಟೆಗೆ ಸಂಭವಿಸಿದೆ. ಇಂದು ಬೆಳಗ್ಗೆ ಮೃತದೇಹ ಪತ್ತೆಯಾಗಿದೆ.
ಮೃತ ವೈದ್ಯ ನಗರದ ಎ ಜೆ ಆಸ್ಪತ್ರೆಯಲ್ಲಿ ಸರ್ಜನ್ ಆಗಿರುವ ಡಾ. ಆಶೀಕ್ ಗೌಡ (30) ಎಂದು ಗುರುತಿಸಲಾಗಿದೆ. ನಿನ್ನೆ ತಡರಾತ್ರಿ ನಗರದಿಂದ ಸೋಮೇಶ್ವರಕ್ಕೆ ಮೃತ ವೈದ್ಯ ಸೇರಿದಂತೆ ಇನ್ನೋರ್ವ ಸರ್ಜನ್ ಕುಂದಾಪುರ ಮೂಲದ ಡಾ. ಪ್ರದೀಶ್ ಮೂವರು ಇಂಟರ್ನ್ಶಿಪ್ನಲ್ಲಿ ಕಾರ್ಯ ನಡೆಸುತ್ತಿರುವ ವೈದ್ಯೆಯರ ಜೊತೆಗೆ ಸಮುದ್ರ ವಿಹಾರಕ್ಕೆಂದು ಸೋಮೇಶ್ವರಕ್ಕೆ ಬಂದಿದ್ದಾರೆ.
ರುದ್ರಪಾದೆಯಲ್ಲಿ ವಿಹರಿಸುತ್ತಿದ್ದ ಸಂದರ್ಭ ಡಾ.ಪ್ರದೀಶ್ ಕಲ್ಲಿನಿಂದ ಸಮುದ್ರಕ್ಕೆ ಜಾರಿ ಬಿದ್ದಿದ್ದಾರೆ. ನೀರಿನಲ್ಲಿ ನಿಂತು ರಕ್ಷಣೆಗೆ ಕೂಗುತ್ತಿದ್ದ ಸಂದರ್ಭ ಡಾ.ಆಶೀಕ್ ಗೌಡ ಇಣುಕುವ ಕ್ಷಣದಲ್ಲಿ ಕಾಲುಜಾರಿ ಬಿದ್ದು ಸಮುದ್ರಪಾಲಾಗಿದ್ದಾರೆ. ಡಾ. ಪ್ರದೀಶ್ ಸಣ್ಣ ಕಲ್ಲು ಹಿಡಿದು ಸಮುದ್ರದಿಂದ ಮೇಲಕ್ಕೆ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದ್ರೆ ತಡರಾತ್ರಿವರೆಗೂ ಅಗ್ಮಿಶಾಮಕ ದಳ, ಉಳ್ಳಾಲ ಪೊಲೀಸ್ ಠಾಣೆ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಇಂದು ಅಲ್ಲೇ ಸಮುದ್ರ ತೀರದಲ್ಲಿ ಡಾ. ಆಶೀಕ್ಗೌಡರ ಮೃತದೇಹ ಪತ್ತೆಯಾಗಿದೆ.
ಇನ್ನು ವೈದ್ಯ ಆಶೀಕ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಆಶೀಕ್ ಮೃತ ದೇಹವನ್ನು ಆತನ ಸಂಬಂಧಿಕರಿಗೆ ನೀಡಲಾಗುತ್ತದೆ. ಈ ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದಾರೆ.
ಓದಿ: ದರ್ಗಾಕ್ಕೆ ಭೇಟಿ ನೀಡಲು ಬಂದು ಕೃಷ್ಣಾ ನದಿ ಪಾಲಾದ ಯುವಕ: ಮುಂದುವರಿದ ಶೋಧ
ಕನ್ಯಾಕುಮಾರಿಯಲ್ಲಿ ಬೆಂಗಳೂರಿನ ಇಬ್ಬರು ನೀರುಪಾಲು: ವಾರಾಂತ್ಯ ಹಿನ್ನೆಲೆ ಪ್ರವಾಸಕ್ಕಾಗಿ ಕನ್ಯಾಕುಮಾರಿಗೆ ಆಗಮಿಸಿದ್ದ ಬೆಂಗಳೂರಿನ ಪ್ರವಾಸಿಗರಲ್ಲಿ ಮೂವರು ಸಮುದ್ರಪಾಲಾಗಿ, ಇಬ್ಬರು ಸಾವನ್ನಪ್ಪಿರುವ ಘಟನೆ ಭಾನುವಾರ ನಡೆದಿದೆ. ಮೃತರನ್ನು ಬೆಂಗಳೂರಿನ ಖಾಸಗಿ ಕಂಪನಿ ಉದ್ಯೋಗಿಗಳಾದ ಮಣಿ (30), ಸುರೇಶ್(30) ಎಂದು ಗುರುತಿಸಲಾಗಿದೆ. ನೀರು ಪಾಲಾಗಿದ್ದ ಬಿಂದು ಅವರನ್ನು ಭದ್ರತಾ ಪಡೆಗಳ ಸಿಬ್ಬಂದಿ ರಕ್ಷಣೆ ಮಾಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರಿಗೆ ಚಿಕಿತ್ಸೆ ಮುಂದುವರಿದಿದೆ.
ಸೆಪ್ಟೆಂಬರ್ 2ರಂದು ಬೆಂಗಳೂರಿನಿಂದ 10 ಜನ ಪ್ರವಾಸಿಗರು ಕನ್ಯಾಕುಮಾರಿಗೆ ಬಂದಿದ್ದರು. ಈ ಎಲ್ಲರೂ ಬೆಂಗಳೂರಿನ ಖಾಸಗಿ ಕಂಪನಿಯ ಉದ್ಯೋಗಿಗಳಾಗಿದ್ದಾರೆ. ಶನಿವಾರ ಕನ್ಯಾಕುಮಾರಿಯಲ್ಲಿನ ಹೋಟೆಲ್ ಒಂದರಲ್ಲಿ ಎಲ್ಲರೂ ತಂಗಿದ್ದರು. ಬಳಿಕ ಭಾನುವಾರ ಇಲ್ಲಿನ ಕೋವಲಂ ಬೀಚ್ನ್ನು ನೋಡಲು ಬಂದಿದ್ದಾರೆ. ನಂತರ ಎಲ್ಲರೂ ಸಮುದ್ರಕ್ಕೆ ಇಳಿದು ಎಂಜಾಯ್ ಮಾಡುತ್ತಿದ್ದರು. ಈ ಸಂದರ್ಭ ಗುಂಪಿನಲ್ಲಿದ್ದ ಮಣಿ, ಸುರೇಶ್, ಬಿಂದು ಆಳ ಜಾಸ್ತಿ ಇರುವ ಕಡೆಗೆ ತೆರಳಿದ್ದು, ಬೃಹತ್ ಅಲೆಗಳಿಗೆ ಸಿಲುಕಿ ಮೂವರು ಕೊಚ್ಚಿಹೋಗಿದ್ದಾರೆ.