ಮಂಗಳೂರು: ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಕೆಲವೇ ಗಂಟೆಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಮೂಲದ ವ್ಯಕ್ತಿಯೊಬ್ಬರು ಮುಂಬೈಯಲ್ಲಿ ಕೊರೊನಾದಿಂದ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಸಂಭವಿಸಿದೆ.
ಈ ಹಿಂದೆ ವಿದೇಶದಲ್ಲಿದ್ದ ಅವರು, ಇದೀಗ ಸಹೋದರನ ಜೊತೆಯಲ್ಲಿ ಪುಣೆಯಲ್ಲಿ ಕೆಲಸ ಮಾಡುತ್ತಿದ್ದರು. ಲಾಕ್ಡೌನ್ ಆರಂಭವಾಗುವ ದಿನ ಮುಂಬೈಗೆ ಸಹೋದರಿ ಮನೆಗೆ ಬಂದಿದ್ದ ಅವರು, ಬಳಿಕ ಮುಂಬೈಯಲ್ಲಿ ಸಿಲುಕಿಕೊಂಡಿದ್ದರು. ಈ ನಡುವೆ ಅವರಿಗೆ ಕೊರೊನಾ ಸೋಂಕು ತಗುಲಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಇತ್ತ ಮೂಡುಬಿದಿರೆಯಲ್ಲಿದ್ದ ತುಂಬು ಗರ್ಭಿಣಿಯಾಗಿದ್ದ ಅವರ ಪತ್ನಿ, ನಿನ್ನೆ ಬೆಳಗ್ಗೆ 9.30ರ ಸುಮಾರಿಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಅತ್ತ ಮುಂಬೈಯಲ್ಲಿ ಆಸ್ಪತ್ರೆಯಲ್ಲಿದ್ದ ವ್ಯಕ್ತಿ ಕೊರೊನಾ ಸೋಂಕಿನಿಂದ ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಮಧ್ಯಾಹ್ನನದ ಹೊತ್ತಿಗೆ ಮೃತಪಟ್ಟಿದ್ದಾರೆ. ಮಗುವಿನ ಮುಖವನ್ನು ನೋಡದೇ ಇಹಲೋಕ ತ್ಯಜಿಸಿದ ವ್ಯಕ್ತಿಯ ಪತ್ನಿಗೆ ಇನ್ನೂ ಪತಿಯ ಮರಣದ ವಿಚಾರ ತಿಳಿದಿಲ್ಲ.