ಬೆಳ್ತಂಗಡಿ : ಎಳನೀರು, ಬಂಗಾರಪಲ್ಕೆ ಜಲಪಾತ ಬಳಿ ನಾಪತ್ತೆಯಾಗಿದ್ದ ಯುವಕ ಸನತ್ ಶೆಟ್ಟಿ ಮೃತದೇಹ, ಸತತ 22 ದಿನಗಳ ಕಾರ್ಯಾಚರಣೆಯ ಬಳಿಕ ಪತ್ತೆಯಾಗಿದೆ.
ಜ.25ರಂದು ಮಧ್ಯಾಹ್ನ 1.30ರ ಸುಮಾರಿಗೆ ಮಲವಂತಿಗೆ ಗ್ರಾಮದ ಬಂಗಾರಪಲ್ಕೆ ಬಡಮನೆ ಅಬ್ಬಿ ಜಲಪಾತ ವೀಕ್ಷಣೆಗೆ ತೆರಳಿದ್ದ ಸಂದರ್ಭದಲ್ಲಿ ಗುಡ್ಡ ಕುಸಿದು, ಉಜಿರೆಯ ನಿವಾಸಿ ಸನತ್ ಶೆಟ್ಟಿ ಮಣ್ಣಿನಡಿ ಸಿಲುಕಿ, ಉಳಿದವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದರು. ಸುಮಾರು 22 ದಿನಗಳ ಕಾಲ ಸತತ ಕಾರ್ಯಾಚರಣೆ ನಡೆಸಿ ಇಂದು ಸನತ್ ಶೆಟ್ಟಿ ಮೃತದೇಹ ಪತ್ತೆ ಮಾಡಲಾಗಿದೆ.
ಇದನ್ನೂ ಓದಿ.. ಜಲಪಾತ ವೀಕ್ಷಣೆ ವೇಳೆ ಗುಡ್ಡ ಕುಸಿತ: ಇನ್ನೂ ಸಿಗದ ಯುವಕನ ಕುರುಹು!
ಫಲಿಸಿದ ಕಾರ್ಯಾಚರಣೆ : ಜ.26ರಿಂದ ಘಟನಾ ಸ್ಥಳದಲ್ಲಿ ರಾಜ್ಯ ವಿಪತ್ತು ನಿರ್ವಹಣಾ ತಂಡ, ಅಗ್ನಿಶಾಮಕದಳ, ಗೃಹರಕ್ಷಕ ದಳ, ಪೊಲೀಸ್ ಇಲಾಖೆ ಸಿಬ್ಬಂದಿ ಸತತ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಇವರ ಜೊತೆಗೆ ವಿವಿಧ ಸಂಘ-ಸಂಸ್ಥೆಗಳ ಸದಸ್ಯರು, ಸ್ಥಳೀಯರು, ಸಾರ್ವಜನಿಕರು ಸಹಕರಿಸುವ ಮೂಲಕ, ಮಗನ ದೇಹ ಪತ್ತೆ ಮಾಡಿ ಕೊಡಿ ಎಂಬ ಪೋಷಕರ ಕರೆಗೆ ಓಗೊಟ್ಟು ಕಾರ್ಯಾಚರಣೆ ನಡೆಸಿ ಇಂದು ಮೃತದೇಹ ಪತ್ತೆ ಮಾಡಿ ಹೊರ ತೆಗೆದಿದ್ದಾರೆ.