ಮಂಗಳೂರು: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ್ದ ಅಪಘಾತಕ್ಕೆ ಇಂದಿಗೆ ಹತ್ತು ವರ್ಷ ತುಂಬಿದ್ದು, ಘಟನೆಯಲ್ಲಿ ಸಾವನ್ನಪ್ಪಿದವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ದುರ್ಘಟನೆ ಸಂಭವಿಸಿ ಇಂದಿಗೆ ಹತ್ತು ವರ್ಷವಾದ ಹಿನ್ನೆಲೆಯಲ್ಲಿ ಇಂದು ದ.ಕ ಜಿಲ್ಲಾಡಳಿತದಿಂದ ವಿಮಾನ ದುರಂತದಲ್ಲಿ ಸಾವನ್ನಪ್ಪಿದವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮ ನಡೆಯಿತು. ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲ್, ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್, ಮಂಗಳೂರು ವಿಮಾನ ನಿಲ್ದಾಣ ಸಿಬ್ಬಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಅಮದು ದುಬೈನಿಂದ ಬಂದಿದ್ದ ವಿಮಾನ ಮಂಗಳೂರು ಏರ್ಪೋರ್ಟ್ನಲ್ಲಿ ಲ್ಯಾಂಡ್ ಆಗುವಾಗ ರನ್ ವೇಯಲ್ಲಿ ನಿಲ್ಲದೆ ಸೂಚನಾ ಗೋಪುರದ ಕಂಬಗಳಿಗೆ ಡಿಕ್ಕಿಯಾಗಿ ಅದನ್ನು ತುಂಡರಿಸಿ ಆಳ ಪ್ರದೇಶಕ್ಕೆ ಉರುಳಿತ್ತು. ಸುಮಾರು 166 ಪ್ರಯಾಣಿಕರಿದ್ದ ವಿಮಾನದಲ್ಲಿ 158 ಮಂದಿ ಸಾವನ್ನಪ್ಪಿ, 8 ಮಂದಿ ಬದುಕುಳಿದಿದ್ದರು. 135 ವಯಸ್ಕರು, 19 ಮಕ್ಕಳು, 4 ಶಿಶುಗಳು ಮತ್ತು 6 ಮಂದಿ ಸಿಬ್ಬಂದಿ ಸಾವನ್ನಪ್ಪಿದ್ದರು.
ದುರಂತದಲ್ಲಿ ಸಾವನ್ನಪ್ಪಿದ 12 ಮಂದಿಯ ಗುರುತು ಪತ್ತೆಯಾಗದ ಹಿನ್ನೆಲೆಯಲ್ಲಿ ಅವರ ಪಾರ್ಥಿವ ಶರೀರವನ್ನು ಜಿಲ್ಲಾಡಳಿತ ಮಂಗಳೂರಿನ ಕೂಳೂರು ಸೇತುವೆ ಬಳಿಯ ಕೂಳೂರು ತಣ್ಣೀರುಬಾವಿ ರಸ್ತೆ ಬದಿ ನದಿ ತೀರದಲ್ಲಿ ಅಂತ್ಯ ಸಂಸ್ಕಾರ ನಡೆಸಿತ್ತು.
ಪರಿಹಾರದಲ್ಲಿ ಅನ್ಯಾಯ ಆರೋಪ:
ಇನ್ನು, ಅಪಘಾತದಲ್ಲಿ ಮಡಿದವರಿಗೆ ಸಿಗಬೇಕಿದ್ದ ಪರಿಹಾರದ ಮೊತ್ತ ಸಿಗದೆ ಅನ್ಯಾಯವಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಕೆಲವರಿಗೆ 35 ಲಕ್ಷ ಪರಿಹಾರ ಸಿಕ್ಕರೆ, ಇನ್ನು ಕೆಲವು ಬೆರಳೆಣಿಕೆಯಷ್ಟು ಸಂತ್ರಸ್ತರಿಗೆ 7 ಕೋಟಿವರೆಗೆ ಪರಿಹಾರ ದೊರೆತಿದೆ. ಸಾವನ್ನಪ್ಪಿದವರ ಪ್ರಾಯ ಮತ್ತು ಅವರು ಆ ಸಂದರ್ಭದಲ್ಲಿ ಗಳಿಸುತ್ತಿದ್ದ ಆದಾಯ ಪರಿಗಣಿಸಿ ಪರಿಹಾರ ನೀಡಲಾಗಿದ್ದರೂ ಅದು ನ್ಯಾಯಯುತವಾಗಿ ನೀಡಲಾಗಿಲ್ಲ ಎಂಬ ಆರೋಪಗಳು ಇಂದಿಗೂ ಕೂಡ ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ವಿಮಾನ ದುರಂತ ಸಂತ್ರಸ್ತರ ಸಮಿತಿ ಸಲಾಂ ಎಂಬುವರು ಇದನ್ನು ಸುಪ್ರೀಂಕೋರ್ಟ್ನ ಅಂಗಳಕ್ಕೆ ತಂದಿದ್ದು, ನ್ಯಾಯದ ನಿರೀಕ್ಷೆಯಲ್ಲಿದ್ದಾರೆ.
ಈ ದುರಂತದಲ್ಲಿ ಸಾವನ್ನಪ್ಪಿದ್ದ ಸಂತ್ರಸ್ತರಿಗೆ ಆಗಿನ ದ.ಕ ಜಿಲ್ಲಾಧಿಕಾರಿಯಾಗಿದ್ದ ಎ.ಬಿ. ಇಬ್ರಾಹಿಂ ಅವರು ಅದೇ ಸ್ಥಳದಲ್ಲಿ ಸ್ಮಾರಕ ನಿರ್ಮಿಸಿದ್ದರು. ಈ ಸ್ಮಾರಕದಲ್ಲಿ ಪ್ರತಿ ವರ್ಷ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಸಲಾಗುತ್ತದೆ.