ಬಂಟ್ವಾಳ: ಪೊಳಲಿ ಜಾತ್ರೋತ್ಸವದಲ್ಲಿ ಕಳೆದು ಹೋದ ಸುಮಾರು 7 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ವಾರಸುದಾರರಿಗೆ ದೇವಸ್ಥಾನದ ಸಿಬ್ಬಂದಿ ರವಿ ಉಗ್ರಾಣಿ ಹಿಂದಿರುಗಿಸಿ ಗಮನ ಸೆಳೆದಿದ್ದಾರೆ.
ಪೊಳಲಿ ರಥೋತ್ಸವದ ಮರುದಿನ ಉಳ್ಳಾಕ್ಲು ಮಗ್ರಂತಾಯಿ ದೈವದ ನೇಮದಂದು ಕ್ಷೇತ್ರದ ಗಡಿಕಾರ ಅರ್ಕುಳ ಕಂಪ ಸದಾನಂದ ಆಳ್ವ, ನೇಮ ಮುಗಿದು ಬೆಳಗ್ಗೆ ದೇವಸ್ಥಾನದ ಅತಿಥಿ ಗೃಹ ಪಲ್ಗುಣಿಯಲ್ಲಿ ಸ್ನಾನಕ್ಕೆಂದು ಹೋದವರು ತಮ್ಮ ಚಿನ್ನದ ಆಭರಣಗಳನ್ನು ಅಲ್ಲಿಯೇ ತಮಗರಿವಿಲ್ಲದಂತೆ ಬಿಟ್ಟು ಬಂದಿದ್ದರು. ಭಂಡಾರ ತಿರುಗಿ ತುಪ್ಪೆಕಲ್ಲು ಕ್ಷೇತ್ರಕ್ಕೆ ಬಂದ ನಂತರ ಆಳ್ವ ತಮ್ಮ ಮನೆಯಲ್ಲಿ ವಿಶ್ರಾಂತಿ ಪಡೆದರು.
ಈ ಸಂದರ್ಭ ಶ್ರೀ ಪೊಳಲಿ ಕ್ಷೇತ್ರದ ಆಡಳಿತ ಮೊಕ್ತೇಸರರಾದ ಡಾ. ಮಂಜಯ್ಯ ಶೆಟ್ಟಿ ಅವರಿಂದ ಕರೆ ಬಂತು. ಆಗಲೇ ಅವರಿಗೆ ಆಭರಣ ಕಳೆದುಕೊಂಡದ್ದು ಅರಿವಾಯಿತು. ಕ್ಷೇತ್ರದ ಸಿಬ್ಬಂದಿ ರವಿ ಉಗ್ರಾಣಿಯವರಿಗೆ ಈ ಆಭರಣಗಳು ದೊರಕಿ, ಅದನ್ನು ಕ್ಷೇತ್ರದ ಪ್ರಮುಖರ ಗಮನಕ್ಕೆ ತಂದಿದ್ದರು. ಪ್ರಾಮಾಣಿಕತೆ ಮೆರೆದ ಸಿಬ್ಬಂದಿ ರವಿ ಉಗ್ರಾಣಿಯವರನ್ನು ಕ್ಷೇತ್ರದ ಪವಿತ್ರಪಾಣಿ ಮಾಧವ ಅಡಿಗರ ಸಮ್ಮುಖದಲ್ಲಿ ಆಳ್ವ ಅವರು ಬಹುಮಾನ ನೀಡಿ ಅಭಿನಂದಿಸಿದರು.