ಮಂಗಳೂರು : ಇಂದಿನಿಂದ ಮೂರನೇ ಹಂತದ ಅನ್ಲಾಕ್ ಜಾರಿಯಾದ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ದೇಗುಲಗಳು ಬಾಗಿಲು ತೆರೆದಿದ್ದು, ಜನರು ದೇವರ ದರ್ಶನ ಪಡೆದು ಪುನೀತರಾದರು.
ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ದೇವಸ್ಥಾನಕ್ಕೆ ಬೆಳಗ್ಗೆಯಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ಸರ್ಕಾರದ ಮಾರ್ಗಸೂಚಿಯಂತೆ ಕೇವಲ ದೇವರ ದರ್ಶನ ಮಾತ್ರ ಮಾಡಬಹುದಾಗಿದ್ದು, ಯಾವುದೇ ಸೇವೆಗಳಿಗೆ ಅವಕಾಶವಿಲ್ಲ. ಹಾಗಾಗಿ, ದೇವಸ್ಥಾನದಲ್ಲಿ ಜನಜಂಗುಳಿ ಇರಲಿಲ್ಲ.
ಕೋವಿಡ್ ನಿಯಮ ಪಾಲನೆಯೊಂದಿಗೆ ಮಂಜುನಾಥನ ದರ್ಶನ : ಜಿಲ್ಲೆಯ ಪ್ರಮುಖ ದೇವಾಲಯ ಧರ್ಮಸ್ಥಳಕ್ಕೂ ಬೆಳ್ಳಂಬೆಳಗ್ಗೆಯೇ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ದೇವಾಲಯದಲ್ಲಿ ಕೋವಿಡ್ ನಿಯಮ ಪಾಲನೆಯೊಂದಿಗೆ ದೇವರ ದರ್ಶನಕ್ಕೆ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಮಾಸ್ಕ್ ಧರಿಸದವರನ್ನು ಎಚ್ಚರಿಸುವ ಕೆಲಸವನ್ನು ಸಿಬ್ಬಂದಿ ಮಾಡುತ್ತಿದ್ದಾರೆ. ಯಾವುದೇ ನೂಕು ನುಗ್ಗಲು ಇಲ್ಲದೆ, ಜನ ದೇವರ ದರ್ಶನ ಪಡೆಯುತ್ತಿದ್ದಾರೆ. ಇನ್ನು, ಜಿಲ್ಲೆಯ ಪ್ರಸಿದ್ದ ದೇವಾಲಯಗಳಾದ ಕುಕ್ಕೆ ಸುಬ್ರಹ್ಮಣ್ಯ, ಕಟೀಲಿಗೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆಯುತ್ತಿದ್ದಾರೆ.
ಓದಿ : ಸಿದ್ದಾರೂಢರ ಮಠ, ಸೋಮೇಶ್ವರ ದೇವಸ್ಥಾನ ಓಪನ್: ಇಂದಿನಿಂದ ಭಕ್ತರಿಗೆ ಮುಕ್ತ ಅವಕಾಶ