ಮಂಗಳೂರು: ನಗರದ ಸುರತ್ಕಲ್‌ನ ಖಾಸಗಿ ಬಾರ್‌ನಲ್ಲಿ ನಡೆದ ಯುವಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುರತ್ಕಲ್ ಪೊಲೀಸರು ಮತ್ತೆ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಸುರತ್ಕಲ್ ನಿವಾಸಿಗಳಾದ ಮನೋಜ್ ಯಾನೆ ಮನು (40), ಶರತ್ ಯಾನೆ ಮುನ್ನಾ (35), ಪ್ರವೀಣ್ ಕುಂದರ್ (42), ದೀಪಕ್ ರಾಜ್ (33), ಮಿಥುನ್ (40) ಬಂಧಿತ ಆರೋಪಿಗಳು. ಘಟನೆ ನಡೆದ ಮರುದಿನ ಮೂವರನ್ನು ಬಂಧಿಸಲಾಗಿತ್ತು. ಇದೀಗ ಬಂಧಿತರ ಸಂಖ್ಯೆ ಎಂಟಕ್ಕೇರಿದೆ.
ಮಂಗಳೂರು ನಗರದ ಹೊರವಲಯದ ಸುರತ್ಕಲ್‌ನ ಖಾಸಗಿ ಬಾರ್‌ನಲ್ಲಿ ನ.29ರಂದು ರಾತ್ರಿ 10:40ಕ್ಕೆ ಗುಡ್ಡೆಕೊಪ್ಲದ ಸಂದೇಶ್(30)ನ್ನು ಕೊಲೆ ಮಾಡಲಾಗಿತ್ತು. ಸಂದೇಶ್ ರಾತ್ರಿ ಸುರತ್ಕಲ್ ಜಂಕ್ಷನ್ ಸಮೀಪದ ಖಾಸಗಿ ಬಾರ್ ಮುಂಭಾಗ ತನ್ನ ಸ್ನೇಹಿತರನ್ನು ಭೇಟಿಯಾಗಲು ತೆರಳಿದ್ದ. ನವರಾತ್ರಿ ಸಮಯದಲ್ಲಿ ಹುಲಿವೇಷ ಹಾಕುವ ತಂಡವನ್ನು ಮುನ್ನಡೆಸುವ ವಿಚಾರವಾಗಿ ಗೆಳೆಯರ ನಡುವೆ ಈ ಹಿಂದೆ ಗಲಾಟೆಯೂ ನಡೆದಿತ್ತು. ಹಾಗಾಗಿ ಗೆಳೆತನದಲ್ಲಿ ಬಿರುಕು ಮೂಡಿತ್ತು. ಮಾತಿನ ಚಕಮಕಿಯಲ್ಲಿ ಇದೇ ವಿಚಾರ ಮತ್ತೆ ಪ್ರಸ್ತಾಪವಾಗಿ ಕುಡಿದ ಮತ್ತಿನಲ್ಲಿದ್ದ ಆರೋಪಿಗಳು, ಬಾರ್‌ನ ಬಾಗಿಲಿನ ಒಳ ಚಿಲಕ ಹಾಕಿ ಸಂದೇಶ್‌ನನ್ನು ಮಾರಕಾಯುಧಗಳಿಂದ ಬರ್ಬರವಾಗಿ ಕೊಚ್ಚಿ ಹಾಕಿದ್ದರು. ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.