ಸುಳ್ಯ(ದಕ್ಷಿಣ ಕನ್ನಡ): ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ವೇಳೆ ಮನೆ ಹಿಂದೆ ಇದ್ದ ಗುಡ್ಡ ಕುಸಿದು ಮಣ್ಣಿನಡಿಗೆ ಸಿಲುಕಿ ಗದಗ ಜಿಲ್ಲೆಯ ಮೂವರು ಕಾರ್ಮಿಕರು ಮೃತಪಟ್ಟಿರುವ ದುರ್ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅಲೆಟ್ಟಿ ಬಳಿ ನಡೆದಿದೆ. ಈ ಘಟನೆಯಲ್ಲಿ ಇಬ್ಬರು ಪುರುಷರು ಹಾಗೂ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ.
ಗದಗ ಜಿಲ್ಲೆಯ ಮುಂಡರಗಿಯ ಮೂಲದ ಸೋಮಶೇಖರ ರೆಡ್ಡಿ(45) ಮತ್ತು ಅವರ ಪತ್ನಿ ಶಾಂತಾ (40) ಹಾಗೂ ಮತ್ತೋರ್ವ ಪುರುಷ ಮೃತಪಟ್ಟಿದ್ದಾರೆ. ಇನ್ನೋರ್ವ ವ್ಯಕ್ತಿಯ ಹೆಸರು ತಿಳಿದು ಬಂದಿಲ್ಲ.
ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳ ಮತ್ತು ಪೊಲೀಸರು ನಿರಂತರ ಕಾರ್ಯಾಚರಣೆ ನಡೆಸಿ ಇಬ್ಬರ ಮೃತದೇಹಗಳನ್ನು ಹೊರತೆಗದಿದ್ದು. ಇನ್ನೊಬ್ಬರ ಮೃತ ದೇಹಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಸಚಿವ ಎಸ್. ಅಂಗಾರ ಅವರು ಆಗಮಿಸಿದ್ದಾರೆ. ಶನಿವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಅಲೆಟ್ಟಿ ರಸ್ತೆಯಲ್ಲಿ ಸೆಂಟರಿಂಗ್ ಕೆಲಸ ಮಾಡುತ್ತಿದ್ದಾಗ ಮನೆಯ ಹಿಂದೆ ಇದ್ದ ದೊಡ್ಡ ಗುಡ್ಡ ಕುಸಿದು ಕಾರ್ಮಿಕರ ಮೇಲೆ ಬಿದ್ದ ಪರಿಣಾಮ ಅನಾಹುತ ಸಂಭವಿಸಿದೆ.
ಘಟನ ನಡೆದ ಸ್ಥಳಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಮೀನುಗಾರಿಗೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್ ಅಂಗಾರ ಅವರು, ಈ ದುರ್ಘಟನೆಯಲ್ಲಿ ಮೂರು ಜನ ಕಾರ್ಮಿಕರು ಮೃತಪಟ್ಟಿದ್ದಾರೆ. ಮೃತ ಕೂಲಿ ಕಾರ್ಮಿಕರ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಗಮನಕ್ಕೆ ತಂದು ಸರ್ಕಾರದಿಂದ ಪರಿಹಾರ ನೀಡುವ ಹಾಗೆ ಪ್ರಯತ್ನಿಸುತ್ತೇನೆ ಎಂದರು.
ಅನುಮತಿ ಪಡಿಯದೆ ಕಾನೂನು ಬಾಹಿರವಾಗಿ ಗುಡ್ಡವನ್ನು ಸಮತಟ್ಟು ಮಾಡುವವರ ವಿರುದ್ಧ ಕ್ರಮ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಬೆಳ್ತಂಗಡಿ, ಪುತ್ತೂರು ಭಾಗ ಗುಡ್ಡಗಾಡು ಪ್ರದೇಶವಾದ ಕಾರಣ ಒಂದು ಮನೆಯನ್ನು ನಿರ್ಮಾಣ ಮಾಡಬೇಕಾದರೆ ಜಾಗ ಸಮತಟ್ಟು ಮಾಡಬೇಕು. ಆಗ ಗುಡ್ಡವನ್ನು ಸಮತಟ್ಟು ಮಾಡುತ್ತಾರೆ. ಸರ್ಕಾರದಿಂದ ಅನುಮತಿಯನ್ನು ಪಡೆಯದೇ ಕಾನೂನು ಬಾಹಿರವಾಗಿ ಗುಡ್ಡವನ್ನು ಕಡಿಯುವವರ ವಿರುದ್ಧ ತಕ್ಷಣ ಕ್ರಮವನ್ನು ತೆಗೆದುಕೊಳ್ಳುತ್ತೀವಿ ಎಂದು ಹೇಳಿದರು.
ವಿಜಯಪುರದಲ್ಲಿ ಇಬ್ಬರು ಕಾರ್ಮಿಕರು ಸಾವು: ಕಾಲುವೆಯಲ್ಲಿ ಮೋಟಾರ್ ರಿಪೇರಿ ಮಾಡುವ ವೇಳೆ ಇಬ್ಬರು ಕಾರ್ಮಿಕರು ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಮಾವಿನಹಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಮೃತ ಕಾರ್ಮಿಕರನ್ನು ಭೋಜರಾಜ್ ದಶವಂತ ಹಾಗೂ ರಾಜಕುಮಾರ ದಶವಂತ ಎಂದು ಗುರುತಿಸಲಾಗಿದೆ. ಕಾಲುವೆ ಮೇಲೆ ನಿಂತು ಮೋಟಾರ್ ರಿಪೇರಿ ಮಾಡುತ್ತಿದ್ದಾಗ ಭೋಜರಾಜ್ ಕಾಲು ಜಾರಿ ಬಿದ್ದು ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿದ್ದ. ಅದನ್ನು ನೋಡಿದ ರಾಜಕುಮಾರ ಕಾಪಾಡಲು ಹೋಗಿ ಆತನೂ ಸಹ ನೀರಿನ ರಭಸಕ್ಕೆ ಕೊಚ್ಚಿ ಹೋಗಿ ಇಬ್ಬರು ಮೃತಪಟ್ಟಿದ್ದಾರೆ.
ಇದನ್ನೂ ಓದಿ : ಮೋಟಾರ್ ರಿಪೇರಿ ಮಾಡುವ ವೇಳೆ ಜಾರಿ ಬಿದ್ದು ಇಬ್ಬರು ಕಾರ್ಮಿಕರ ಸಾವು!