ಸುಳ್ಯ (ದಕ್ಷಿಣ ಕನ್ನಡ): ಕೊರಳಲ್ಲಿ ಹುಲಿ ಉಗುರು ಮಾದರಿಯ ಪೆಂಡೆಂಟ್ ಧರಿಸಿರುವ ಪ್ರಕರಣಗಳು ಸದ್ಯ ಸದ್ದು ಮಾಡುತ್ತಿವೆ. ಸುಳ್ಯ ನಗರ ಪಂಚಾಯತ್ ಸಿಬ್ಬಂದಿಯೊಬ್ಬರು ಇದೇ ಮಾದರಿಯ ಪೆಂಡೆಂಟ್ ಧರಿಸಿರುವ ಚಿತ್ರವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಕುರಿತು ಅರಣ್ಯ ಅಧಿಕಾರಿಗಳು ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.
ಸುಳ್ಯ ನಗರ ಪಂಚಾಯತ್ ಸಿಬ್ಬಂದಿ ಶಶಿಕಲಾ ಅವರು ಪೆಂಡೆಂಟ್ ಧರಿಸಿರುವ ಫೋಟೋ ವೈರಲ್ ಆಗುತ್ತಿದ್ದು, ಅರಣ್ಯಾಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಈಟಿವಿ ಭಾರತದ ಜೊತೆ ಸುಳ್ಯ ವಲಯ ಅರಣ್ಯಾಧಿಕಾರಿ ಪ್ರವೀಣ್ ಶೆಟ್ಟಿ ಮಾತನಾಡಿದ್ದಾರೆ. "ಶಶಿಕಲಾ ಅವರ ಫೋಟೋ ವೈರಲ್ ಆಗುತ್ತಿದ್ದಂತೆ ಸತ್ಯಾಸತ್ಯತೆ ತಿಳಿಯುವ ಉದ್ದೇಶದಿಂದ ನಾವು ಅವರನ್ನು ನಮ್ಮ ಕಚೇರಿಗೆ ಕರೆಸಿ ಪೆಂಡೆಂಟ್ ವಶಕ್ಕೆ ಪಡೆದಿದ್ದೇವೆ. ಮೇಲ್ನೋಟಕ್ಕೆ ಇದು ಹುಲಿ ಉಗುರು ತರಹ ಕಂಡುಬರುತ್ತಿಲ್ಲ. ಬದಲಾಗಿ ಇದು ಹುಲಿಯ ಹಲ್ಲಿನ ತರಹ ಇದೆ.
ಆದರೆ ಸ್ವಲ್ಪ ಚಿಕ್ಕದಿದೆ. ಶಶಿಕಲಾ ಅವರು ಹೇಳುವ ಪ್ರಕಾರ ತನ್ನ ತಾಯಿಯು ಹಲವು ವರ್ಷಗಳ ಹಿಂದೆ ತಮಗೆ ನೀಡಿದ್ದಾಗಿ ಹೇಳುತ್ತಿದ್ದಾರೆ. ನಾವು ಇದನ್ನು ಪರೀಕ್ಷೆಗಾಗಿ ಲ್ಯಾಬ್ ಟೆಸ್ಟ್‌ಗೆ ಕಳುಹಿಸುತ್ತೇವೆ. ಒಂದು ವೇಳೆ ಇದು ಒರಿಜಿನಲ್ ಆಗಿದ್ದಲ್ಲಿ ಕ್ರಮ ಕೈಗೊಳ್ಳುತ್ತೇವೆ" ಎಂದು ಅರಣ್ಯಾಧಿಕಾರಿ ಪ್ರವೀಣ್ ಶೆಟ್ಟಿ ತಿಳಿಸಿದ್ದಾರೆ.
ಹುಲಿ ಉಗುರು ಮಾದರಿಯ ಪೆಂಡೆಂಟ್ ಧರಿಸಿರುವ ಪ್ರಕರಣದಲ್ಲಿ ಈಗಾಗಲೇ ಬಿಗ್ ಬಾಸ್ ಮನೆಯಿಂದಲೇ ವರ್ತೂರು ಸಂತೋಷ್ ಅವರನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಈ ಬೆನ್ನಲ್ಲೇ ರಾಜ್ಯಾದ್ಯಂತ ಹುಲಿ ಉಗುರು ಮಾದರಿಯ ಪೆಂಡೆಂಟ್ ಧರಿಸಿರುವವರ ಫೋಟೋಗಳು ವೈರಲ್ ಆಗುತ್ತಿವೆ. ನಟ ದರ್ಶನ್, ಜಗ್ಗೇಶ್, ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಅರಣ್ಯಾಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಡೆಹ್ರಾಡೂನ್ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನೆ: ನಟರಾದ ಜಗ್ಗೇಶ್, ದರ್ಶನ್, ನಿಖಿಲ್ ಕುಮಾರಸ್ವಾಮಿ, ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ನಿವಾಸ ಸೇರಿದಂತೆ ಹಲವು ಕಡೆಗಳಲ್ಲಿ ದಾಳಿ ನಡೆಸಿ ವಶಕ್ಕೆ ಪಡೆದ ಪೆಂಡೆಂಟ್ಗಳನ್ನು ಡೆಹ್ರಾಡೂನ್ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಎಫ್ಎಸ್ಎಲ್ನಲ್ಲಿ ಹುಲಿ ಉಗುರು ಪತ್ತೆ ಕಾರ್ಯ ನಡೆಯಲಿದೆ.
ಈ ಪ್ರಕರಣ ಕುರಿತು ನಟ ಹಾಗೂ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಮತ್ತು ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರು ಸ್ಪಷ್ಟನೆ ನೀಡಿದ್ದು, ತಾವು ಯಾವುದೇ ತಪ್ಪು ಮಾಡಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಹುಲಿ ಉಗುರು ಮಾದರಿ ಪೆಂಡೆಂಟ್ ಪ್ರಕರಣ: ತಲೆತಗ್ಗಿಸುವ ಯಾವ ಕೆಲಸವನ್ನೂ ಮಾಡಿಲ್ಲ, ಮಾಡುವುದೂ ಇಲ್ಲ ಎಂದ ನಟ ಜಗ್ಗೇಶ್