ಸುಳ್ಯ: ಮತದಾನದ ದಿನ ಸಮೀಪವಾಗುತ್ತಿದ್ದಂತೆ ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ವಿವಿಧ ಕಸರತ್ತುಗಳನ್ನು ನಡೆಸಿದರೆ, ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯಕ್ಕೆ ಒತ್ತು ನೀಡದ ಜನನಾಯಕರ ಬಗ್ಗೆ ಆಕ್ರೋಶ ಮುಂದುವರೆದಿದೆ.
ಇದೀಗ ಸುಳ್ಯ ತಾಲೂಕಿನ ಗುತ್ತಿಗಾರಿನ ಬಳಿಯ ರವೀಂದ್ರ ಎಂಬವರು ತನ್ನ ಮನೆಗೆ ಬರುವ ದಾರಿಯ ಗೇಟಿನಲ್ಲಿ ಬೋರ್ಡ್ ಒಂದನ್ನು ಅಳವಡಿಸಿದ್ದಾರೆ. ಇದನ್ನು ನೋಡಿ ಮತಯಾಚನೆಗೆ ಬಂದ ಅಭ್ಯರ್ಥಿಗಳು ಕಕ್ಕಾಬಿಕ್ಕಿ ಆಗಿದ್ದಾರೆ.
ರವೀಂದ್ರ ಅವರ ಮನೆಯ ಗೇಟಿನ ಮುಂದೆ "ದಯವಿಟ್ಟು ಮತ ಯಾಚಿಸಲು ಬರಬೇಡಿ" ಎಂಬ ಬರಹವನ್ನು ನೇತು ಹಾಕಿದ್ದಾರೆ. ತನ್ನ ಮನೆಗೆ ಬರುವ ದಾರಿಯ ವಿಚಾರವಾಗಿ ಬಹು ಕಾಲದ ಸಮಸ್ಯೆಯನ್ನು ಗುತ್ತಿಗಾರು ಪಂಚಾಯತ್ ನಲ್ಲಿ ತಿಳಿಸಿದ್ದು, ಈ ಸಮಸ್ಯೆಯನ್ನು ಈ ತನಕ ಬಗೆಹರಿಸಿಲ್ಲ. ಈ ಬಗ್ಗೆ ಪಂಚಾಯತ್ ಗೆ ಹಲವು ಬಾರಿ ಮನವಿ ನೀಡಿದ್ದರೂ, ಯಾವುದೇ ಗ್ರಾ.ಪಂ ಸದಸ್ಯರಾಗಲೀ, ಪಂಚಾಯತ್ ಆಗಲೀ ಕ್ರಮ ಕೈಗೊಂಡಿಲ್ಲ. ಈ ಕಾರಣದಿಂದಾಗಿ ಈ ಬೋರ್ಡ್‌ನ್ನು ಅಳವಡಿಸಿರುವುದಾಗಿ ರವೀಂದ್ರ ಅವರು ತಿಳಿಸಿದ್ದಾರೆ.