ಮಂಗಳೂರು : ಕೋವಿಡ್ ಭೀತಿಯ ನಡುವೆ ಈ ಬಾರಿಯೂ ಮತ್ತೆ ಗಣೇಶನ ಹಬ್ಬ ಮತ್ತು ತೆನೆ ಹಬ್ಬ ಎರಡು ದಿನಗಳ ಅಂತರದಲ್ಲಿ ಬಂದಿವೆ. ಹಿಂದೂ, ಕ್ರಿಶ್ಚಿಯನ್ ಧರ್ಮದ ಈ ಎರಡೂ ಹಬ್ಬಗಳಿಗೂ ಬಹು ಅಗತ್ಯದ ಕಬ್ಬು ಈ ಬಾರಿ ಉತ್ತಮ ಬೆಲೆಗೆ ಮಾರಾಟವಾಗುತ್ತಿದೆ. ಇದರಿಂದ ಬೆಳೆಗಾರರು ಸಂತಸಗೊಂಡಿದ್ದಾರೆ.
ಕಳೆದ ಬಾರಿ ಕಬ್ಬಿನ ಉತ್ತಮ ಫಸಲು ದೊರಕಿತ್ತು. ಆದರೆ, ಕೋವಿಡ್ ಸೋಂಕಿನ ಪರಿಣಾಮ ಸರಿಯಾದ ಬೆಲೆಗೆ ಖರೀದಿಯಾಗದೆ ಬೆಳೆಗಾರರು ನಷ್ಟ ಅನುಭವಿಸಿದ್ದರು. ಕೆಲವರು ಕನಿಷ್ಟ ಬೆಲೆಗೆ ಬೆಳೆ ಮಾರಿ ಕೈಸುಟ್ಟುಕೊಂಡಿದ್ದರು.
ಈ ಬಾರಿಯೂ ಸೋಂಕಿನ ಭೀತಿ ಇರುವುದರಿಂದ ಕಬ್ಬು ಬೆಳೆಗಾರರಿಗೆ ಮತ್ತೆ ಚಿಂತೆ ಕಾಡುತ್ತಿತ್ತು. ಆದರೆ, ಈಗಾಗಲೇ ಕಬ್ಬು ಉತ್ತಮ ಬೆಲೆಗೆ ಬಿಕರಿಯಾಗುತ್ತಿರುವುದರಿಂದ ಬೆಳೆಗಾರರ ಮುಖದಲ್ಲಿ ನಗೆ ಕಂಡಿದೆ.
ಮಂಗಳೂರಿನ ಹೊರವಲಯದ ಕಿನ್ನಿಗೋಳಿ ಸಮೀಪದ ಬಳ್ಕುಂಜೆ, ಉಳೆಪಾಡಿ, ಕರ್ನಿರೆ ಗ್ರಾಮದ ಜನತೆ ಸಾಕಷ್ಟು ಮಂದಿ ಕೃಷಿಯನ್ನೇ ಅವಲಂಬಿಸಿದ್ದಾರೆ. ಅದರಲ್ಲೂ ಹೆಚ್ಚಿನವರು ಕಬ್ಬನ್ನೇ ಬೆಳೆಯುತ್ತಿದ್ದಾರೆ. ಇಲ್ಲಿನ ಸುಮಾರು 54 ಕುಟುಂಬಗಳು ಈ ಬೆಳೆಯನ್ನೇ ಆಶ್ರಯಿಸಿವೆ. ವರ್ಷಂಪ್ರತಿ ಸುಮಾರು 2 ರಿಂದ 2.50 ಲಕ್ಷದಷ್ಟು ಟನ್ ಕಬ್ಬು ಈ ಗ್ರಾಮದಲ್ಲಿಯೇ ಬೆಳೆಯಲಾಗುತ್ತಿದೆಯಂತೆ.
ಕೋವಿಡ್ನಿಂದಾಗಿ ಕಳೆದ ಬಾರಿ ಬೆಳೆಗಾರರು ನಷ್ಟ ಅನುಭವಿಸಿದ್ದರು. ಮತ್ತೆ ಈ ಬಾರಿಯೂ ನಷ್ಟ ಅನುಭವಿಸಬಾರದೆಂದು ಒಂದು ಕಬ್ಬಿಗೆ 25 ರೂ.ಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡಬಾರದೆಂಬ ತೀರ್ಮಾನ ಕೈಗೊಂಡಿದ್ದಾರೆ. ಈಗ ಉತ್ತಮ ಬೆಲೆಗೆ ಮಾರಾಟವಾಗಿದೆ ಎಂದು ಕಬ್ಬು ಬೆಳೆಗಾರರಾದ ಅನಿತಾ ಸಂತಸ ವ್ಯಕ್ತಪಡಿಸುತ್ತಾರೆ. ಇದಕ್ಕೆ ಉಡುಪಿಯ ಶಾಸಕರು ಹಾಗೂ ಮೂಡುಬಿದಿರೆ ಶಾಸಕರ ಸಹಕಾರವೂ ಇತ್ತು ಎಂದು ನೆನಪಿಸುತ್ತಾರೆ.
ಇಲ್ಲಿನ ಕಬ್ಬು ಮಂಗಳೂರು ಅಲ್ಲದೆ ನೆಲ್ಯಾಡಿ, ಉಪ್ಪಿನಂಗಡಿ ಹಾಗೂ ದೂರದ ಮೂಡಿಗೆರೆವರೆಗೂ ಮಾರಾಟವಾಗುತ್ತದೆ. ಈಗ ಬೇಡಿಕೆ ಇದ್ದರೂ ಕಬ್ಬು ಪೂರ್ತಿ ಖಾಲಿಯಾಗಿದೆ. ಇಳುವರಿ ಇದ್ದರೂ ಬೇಡಿಕೆಯಿಲ್ಲದೆಯೋ, ದಳ್ಳಾಳಿಗಳ ತೊಂದರೆಗಳಿಂದ ಸರಿಯಾದ ಲಾಭ ಕೈಗೆ ಸಿಗುತ್ತಿರಲಿಲ್ಲ. ಆದರೆ, ಈ ಬಾರಿ ಆ ರೀತಿ ಆಗಲಿಲ್ಲ. ಸರಿಯಾದ ಬೆಲೆಗೆ ಕಬ್ಬು ಮಾರಾಟವಾಗಿದೆ ಎಂದರು.
ಓದಿ: ಆರ್ಥಿಕ ಪರಿಸ್ಥಿತಿ ನಿರ್ವಹಣೆ ಮಾಡುವಲ್ಲಿ ಸರ್ಕಾರ ವಿಫಲ: ಸಿದ್ದರಾಮಯ್ಯ ಆರೋಪ