ಮಂಗಳೂರು : ರಂಝಾನ್ ಮತ ಪ್ರವಚನ ನೀಡಲು ಬಂದಿದ್ದ ವಿದ್ಯಾರ್ಥಿಯೋರ್ವ ಮಸೀದಿಯಲ್ಲಿಯೇ ಮೃತಪಟ್ಟ ಘಟನೆ ನಗರದ ಮರಕಡ ಜುಮಾ ಮಸೀದಿಯಲ್ಲಿ ನಡೆದಿದೆ.
ಸುಳ್ಯದ ಅಜ್ಜಾವರದ ಹಸೈನಾರ್ ಎಂಬವರ ಪುತ್ರ ಅಬ್ದುಲ್ ಅಲ್ ಸಿನಾನ್ ಅಜ್ಜಾವರ (20) ಮೃತ ವಿದ್ಯಾರ್ಥಿ. ರಂಝಾನ್ ತಿಂಗಳಲ್ಲಿ ದರ್ಸ್ (ಗುರುಕುಲ) ವಿದ್ಯಾರ್ಥಿಗಳು ವಿವಿಧೆಡೆಗೆ ತೆರಳಿ ಮತ ಪ್ರವಚನ ನೀಡುವುದು ವಾಡಿಕೆ. ಅದರಂತೆ ಅಬ್ದುಲ್ ಅಲ್ ಸಿನಾನ್ ಕಳೆದ ಶುಕ್ರವಾರ ಮರಕಡದ ಜುಮ್ಮಾ ಮಸೀದಿಗೆ ತೆರಳಿದ್ದರು. ಸಂಜೆ ಉಪವಾಸ ತೊರೆದ ಬಳಿಕ ನಮಾಝ್ ನಿರ್ವಹಿಸಿ ಪ್ರವಚನವನ್ನೂ ನೀಡಿದ್ದರು.
ಓದಿ : ತುಳು ಸಿನಿಮಾ ನಿರ್ದೇಶಕ ರಘು ಶೆಟ್ಟಿ ವಿಧಿವಶ
ಆದರೆ, ಶನಿವಾರ ಮುಂಜಾನೆ ಎದ್ದು ಊಟ ಮುಗಿಸಿ ತಟ್ಟೆ ತೊಳೆಯುವ ಸಂದರ್ಭ ಸಿನಾನ್ ಕುಸಿದು ಬಿದ್ದಿದ್ದರು. ಆತನಿಗೆ ಅಪಸ್ಮಾರ ಕಾಯಿಲೆಯಿದ್ದ ಬಗ್ಗೆ ತಿಳಿದ ಮಸೀದಿಯ ಗುರು, ತಕ್ಷಣ ಮನೆಯವರಿಗೆ ಮಾಹಿತಿ ನೀಡಿದ್ದರು. ಬಳಿಕ ಮನೆಯವರ ಸಲಹೆಯಂತೆ ಆತನಿಗೆ ಮಲಗಲು ವ್ಯವಸ್ಥೆ ಮಾಡಲಾಗಿತ್ತು. ಆದರೆ, ಬೆಳಗ್ಗೆ 8 ಗಂಟೆಯಾದರೂ ಸಿನಾನ್ ಎದ್ದೇಳದಿರುವುದನ್ನು ಕಂಡ ಗುರುಗಳು ಎಬ್ಬಿಸಲು ಪ್ರಯತ್ನಿಸಿದಾಗ, ಸಿನಾನ್ ಮಲಗಿದ್ದಲ್ಲಿಯೇ ಮೃತಪಟ್ಟಿರುವುದು ತಿಳಿದು ಬಂದಿದೆ.