ಮಂಗಳೂರು: ಜಿಲ್ಲೆಯಲ್ಲಿ ನಾಳೆಯಿಂದ ಬಹುತೇಕ ಎಲ್ಲಾ ಅಂಗಡಿ- ಮುಂಗಟ್ಟುಗಳು ಕಾರ್ಯಾಚರಿಸಲಿವೆ. ಆದರೆ ಬೆಳಗ್ಗೆ 7ರಿಂದ ಸಂಜೆ 7ರ ತನಕ ಮಾತ್ರ ವ್ಯಾಪಾರ ನಡೆಸಲು ಅವಕಾಶ ನೀಡಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಇನ್ನು ಜಿಲ್ಲೆಯಾದ್ಯಂತ ನಾಳೆಯಿಂದ ಮದ್ಯ ಮಾರಾಟ ಆರಂಭವಾಗಲಿದ್ದು, ಬೆಳಗ್ಗೆ 9 ಗಂಟೆಯಿಂದ ಸಂಜೆ 7 ಗಂಟೆ ವರೆಗೆ ಮಾತ್ರ ಅವಕಾಶ ನೀಡಲಾಗಿದೆ. ಮದ್ಯದ ಮಳಿಗೆಯಲ್ಲಿ ಮಾಲೀಕರನ್ನು ಹೊರತುಪಡಿಸಿ, 2 ರಿಂದ 3 ಮಂದಿ ಸಿಬ್ಬಂದಿ ಇರಬಹುದು. ಮದ್ಯದ ಅಂಗಡಿಯೊಳಗೆ 5 ಜನ ಗ್ರಾಹಕರಿಗೆ ಮಾತ್ರ ಇರಲು ಅವಕಾಶ ನೀಡಲಾಗಿದ್ದು, ಪ್ರತಿಯೊಬ್ಬರ ನಡುವೆ 6 ಅಡಿಗಳ ಅಂತರ ಕಾಯೋದು ಕಡ್ಡಾಯ. ಅಲ್ಲದೆ ಅಂಗಡಿ ಮುಂದೆ ಬ್ಯಾರಿಕೇಟ್ ಅಳವಡಿಕೆ ಮಾಡಲು ಸೂಚಿಸಲಾಗಿದೆ.
ಸಿಬ್ಬಂದಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಕೆ ಕಡ್ಡಾಯ. ಓರ್ವ ವ್ಯಕ್ತಿಗೆ ನಿರ್ದಿಷ್ಟಗೊಳಿಸಿರುವ ನಿಗದಿತ ಪ್ರಮಾಣಕ್ಕಿಂತ ಅಧಿಕ ಮದ್ಯ ಮಾರಾಟ ಮಾಡುವಂತಿಲ್ಲ. ಮದ್ಯ ಮಳಿಗೆಯ ಹೊರಗೆ ಐವರಿಗಿಂತ ಅಧಿಕ ಮಂದಿ ಸೇರುವಂತಿಲ್ಲ. ಅಲ್ಲದೆ ಮಳಿಗೆಯಲ್ಲಿ ಮದ್ಯದ ಹೊರತಾಗಿ ಇತರ ವಸ್ತುಗಳನ್ನು ಮಾರಾಟ ಮಾಡುವಂತಿಲ್ಲ. ಸಿಸಿ ಕ್ಯಾಮರಾಗಳ ಅಳವಡಿಕೆ ಕಡ್ಡಾಯ. ಜೊತೆಗೆ ಕರ್ನಾಟಕ ಅಬಕಾರಿ ಕಾಯ್ದೆಯನ್ನು ತಪ್ಪದೆ ಪಾಲಿಸಬೇಕು. ಜೊತೆಗೆ ಮುಂಜಾಗ್ರತೆ ಕ್ರಮವಹಿಸಿ ಕೆಲಸ ಕಾರ್ಯ ಮಾಡಲು ಸೂಚನೆ ನೀಡಲಾಗಿದೆ.