ಮಂಗಳೂರು: ಜಿಲ್ಲಾ ಮಟ್ಟದ ಕಬಡ್ಡಿ ಆಟಗಾರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪುದುವೆಟ್ಟಿನಲ್ಲಿ ನಡೆದಿದೆ. ಪುದುವೆಟ್ಟು ನಿವಾಸಿ ಸ್ವರಾಜ್(24) ಆತ್ಮಹತ್ಯೆ ಮಾಡಿಕೊಂಡ ಕಬಡ್ಡಿ ಆಟಗಾರ. ಸ್ವರಾಜ್ ಬೆಳ್ತಂಗಡಿ ತಾಲೂಕಿನ ಉಜಿರೆಯ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು. ಅವರು ತಮ್ಮ ಮನೆಯ ಸ್ನಾನದ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಸ್ವರಾಜ್ ಕಬಡ್ಡಿಯಲ್ಲಿ ಜಿಲ್ಲಾಮಟ್ಟವನ್ನು ಪ್ರತಿನಿಧಿಸಿ ಪ್ರಸಿದ್ಧಿಯನ್ನು ಪಡೆದಿದ್ದರು. ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರತ್ಯೇಕ ಪ್ರಕರಣ- ಪಾರ್ಟ್‌ಟೈಂ ಕೆಲಸದ ಆಮಿಷ ₹10.88 ಲಕ್ಷ ವಂಚನೆ: ಆನ್‌ಲೈನ್‌ನಲ್ಲಿ ಪಾರ್ಟ್‌ಟೈಂ ಕೆಲಸದ ಆಮಿಷ ತೋರಿಸಿ ಬರೋಬ್ಬರಿ 10.88 ಲಕ್ಷ ರೂ. ಹೂಡಿಕೆ ಮಾಡಿಸಿ ವಂಚಿಸಿರುವ ಬಗ್ಗೆ ಮಂಗಳೂರಿನ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಕ್ಯುಯೇಟ್ ಮೀಡಿಯಾ ಕಂಪನಿಯ ಪ್ರತಿನಿಧಿಯೆಂದು ಪರಿಚಯಿಸಿಕೊಂಡ ಅಪರಿಚಿತ ವ್ಯಕ್ತಿ ದೂರುದಾರರಿಗೆ ಆ.26ರಂದು ವಾಟ್ಸ್‌ಆ್ಯಪ್ ಸಂದೇಶ ಕಳುಹಿಸಿದ್ದ. ಬಳಿಕ ಆನ್‌ಲೈನ್‌ನಲ್ಲಿ ಟಾಸ್ಕ್ಗಳ ಮೂಲಕ ದಿನನಿತ್ಯವೂ 2-3 ಸಾವಿರ ರೂ. ಸಂಪಾದನೆ ಮಾಡಬಹುದು ಎಂದು ಸಂದೇಶವನ್ನು ರವಾನಿಸಿದ್ದಾನೆ. ಇದನ್ನು ನಂಬಿದ ದೂರುದಾರರು ಆತ ಹೇಳಿದಂತೆ ಹಂತ ಹಂತವಾಗಿ ಹಣವನ್ನು ಹೂಡಿಕೆ ಮಾಡಿದ್ದಾರೆ.
ಆರಂಭದಲ್ಲಿ 1,000 ರೂ.ಗಳಿಂದ 3,000 ರೂ. ನಗದು ತೊಡಗಿಸಿದಾಗ ಅವರ ಖಾತೆಗೆ ಅಷ್ಟೇ ಮೊತ್ತದ ಹಣ ಜಮೆಯಾಗಿತ್ತು. ಆ ಬಳಿಕ ಆನ್‌ಲೈನ್‌ನಲ್ಲಿ ಹಣ ಹೂಡಿಕೆಗೆ ಮತ್ತೆ ಒತ್ತಾಯಿಸಿದ್ದಾನೆ. ಅದರಂತೆ ದೂರುದಾರರಿಂದ ಹಂತಹಂತವಾಗಿ ಆ.28ರ ವರೆಗೆ ಒಟ್ಟು 10.88 ಲಕ್ಷ ರೂ. ವರ್ಗಾಯಿಸಿಕೊಂಡಿದ್ದಾನೆ. ಆದರೆ ಆ ಬಳಿಕ ಯಾವುದೇ ಮೊತ್ತವನ್ನು ಮರುಪಾವತಿಸದೆ ವಂಚಿಸಿದ್ದಾನೆಂದು ಸೆನ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಾವಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ : ಬಾವಿಗೆ ಹಾರಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಮುಂಜಾನೆ ಮೂಡಬಿದಿರೆಯ ಬೆಳುವಾಯಿ ಎಂಬಲ್ಲಿ ನಡೆದಿದೆ. ಬೆಳುವಾಯಿ ಬರಕಲಗುತ್ತು ಮನೆಯ ರಾಮಣ್ಣ ಅವರ ಪುತ್ರ ಸಂತೋಷ್ ಪೂಜಾರಿ (42) ಆತ್ಮಹತ್ಯೆ ಮಾಡಿಕೊಂಡವರು. ಸಂತೋಷ್ ಇಂದು ಮುಂಜಾನೆ ತಮ್ಮ ಪಕ್ಕದ ಮನೆಯ ಬಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ಮೂಡುಬಿದಿರೆಯ ಅಂಗಡಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಇವರು ಹೆಂಡತಿ ಮತ್ತು ಸಣ್ಣ ವಯಸ್ಸಿನ ಇಬ್ಬರು ಅವಳಿ ಪುತ್ರಿಯರನ್ನು ಅಗಲಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.
ಇದನ್ನೂ ಓದಿ: ಮೈಸೂರಲ್ಲಿ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಪ್ರಕರಣ: ಡೆತ್ ನೋಟ್ ಆಧರಿಸಿ ನಾಲ್ವರ ಬಂಧನ