ಮಂಗಳೂರು: ರಾಜ್ಯ ಸರ್ಕಾರ ಕೊರೊನಾ ಹೆಸರಿನಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿದೆ. ಕೊರೊನಾ ಕಿಟ್ ಖರೀದಿ, ಔಷಧಿ ಖರೀದಿ, ಸರ್ಕಾರಿ ಆಸ್ಪತ್ರೆಗಳ ನಿರ್ವಹಣೆ, ಹೊಸ ಆಸ್ಪತ್ರೆಗಳ ನಿರ್ಮಾಣ ಹೀಗೆ ವಿವಿಧ ರೀತಿಯಲ್ಲಿ ಸಾವಿರಾರು ಕೋಟಿ ರೂಪಾಯಿ ಅವ್ಯವಹಾರ ನಡೆಸುತ್ತಿದೆ ಎಂದು ಕಾಂಗ್ರೆಸ್ ದ. ಕ. ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಆರೋಪಿಸಿದರು.
ನಗರದ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, ಜನತೆ ಕೊರೊನಾ ಸೋಂಕನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಸರ್ಕಾರದ ವೈಫಲ್ಯಗಳನ್ನು ಕಾಂಗ್ರೆಸ್ ಎತ್ತಿ ತೋರಿಸುತ್ತಿದೆ. ಇದೇ ರೀತಿ ಸರಕಾರದ ವೈಫಲ್ಯತೆ ಮುಂದುವರಿದಲ್ಲಿ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಹರೀಶ್ ಕುಮಾರ್ ಎಚ್ಚರಿಕೆ ನೀಡಿದರು.
ಕೊರೊನಾ ಹಾವಳಿ ಸುಮಾರು 4 ತಿಂಗಳಿನಿಂದ ಜಾರಿ ಇದೆ. ಸರ್ಕಾರ ಇದನ್ನು ಎದುರಿಸಲು ಪೂರ್ವಸಿದ್ಧತೆ ಮಾಡಿಕೊಳ್ಳದೆ ನಿರ್ಲಕ್ಷ್ಯ ವಹಿಸಿದ ಪರಿಣಾಮ ರಾಜ್ಯದಲ್ಲಿ ಸೋಂಕು ದೊಡ್ಡ ಪ್ರಮಾಣದಲ್ಲಿ ಹರಡುವಂತಾಗಿದೆ. ಸೋಂಕಿನ ಬಗ್ಗೆ ಜನರು ಭಯಭೀತರಾಗಿದ್ದು, ಬಡವರು ಉದ್ಯೋಗವಿಲ್ಲದೆ ಸಂಕಷ್ಟಕ್ಕೊಳಗಾಗಿದ್ದಾರೆ. ಆದ್ದರಿಂದ ಕೆಪಿಸಿಸಿ ಅಧ್ಯಕ್ಷರಿಂದ ಗ್ರಾಪಂ ಸದಸ್ಯರವರೆಗೆ ಎಲ್ಲರೂ ಇಂದು ಬೀದಿಗಿಳಿದು ಹೋರಾಟದಲ್ಲಿ ತೊಡಗಿದ್ದಾರೆ. ಸರ್ಕಾರ ಕೊರೊನಾ ಸೋಂಕು ನಿಭಾಯಿಸುವಲ್ಲಿ ವಿಫಲವಾದಲ್ಲಿ ಮತ್ತೆ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಹರೀಶ್ ಕುಮಾರ್ ಎಚ್ಚರಿಸಿದರು.