ಮಂಗಳೂರು: ಮಾಮೂಲಿ ಯಂತ್ರೋಪಕರಣಗಳಿಂದ ಒಬ್ಬ ರೈತ ಒಂದು ಹೆಕ್ಟೇರ್ ಪ್ರದೇಶದಲ್ಲಿ ವ್ಯವಸ್ಥಿತವಾಗಿ ಬಿತ್ತನೆ ಮಾಡಲು ಕನಿಷ್ಠ 100-120 ಗಂಟೆಗಳನ್ನು ತೆಗೆದುಕೊಂಡರೆ, ನಾನು ಅಭಿವೃದ್ಧಿಪಡಿಸಿರುವ ಸೀಡೋಗ್ರಾಫರ್ ಯಂತ್ರದ ಸಹಾಯದಿಂದ ಒಂದು ಹೆಕ್ಟೇರ್ ಪ್ರದೇಶವನ್ನು ಕೇವಲ 18 ಗಂಟೆಗಿಂತಲೂ ಕಡಿಮೆ ಅವಧಿಯದಲ್ಲಿ ಬಿತ್ತನೆ ಮಾಡಲು ಸಾಧ್ಯ ಎಂದು ರಾಷ್ಟ್ರೀಯ ಬಾಲಪುರಸ್ಕಾರ ಪುರಸ್ಕೃತ ರಾಕೇಶ್ ಕೃಷ್ಣ ಹೇಳಿದರು.
ರಾಷ್ಟ್ರೀಯ ಬಾಲಪುರಸ್ಕಾರ ಪ್ರಶಸ್ತಿಗೆ ಆಯ್ಕೆಯಾಗಿರುವ ರಾಕೇಶ್ ಕೃಷ್ಣ, ಪ್ರಧಾನಿ ಮೋದಿ ಜೊತೆ ವರ್ಚುವಲ್ ಮೀಟಿಂಗ್ನಲ್ಲಿ ಮಾತನಾಡಿ, ಬಳಿಕ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದರು. ಕಡಿಮೆ ಅವಧಿಯಲ್ಲಿ ಸೀಡೋಗ್ರಾಫರ್ ಯಂತ್ರವು ಬಹುಪಯೋಗಿ ಉಪಕರಣವಾಗಿ ಬಳಕೆಯಾಗುವ ಕಾರಣ ಅತೀ ಕಡಿಮೆ ಸಮಯದಲ್ಲಿ ದೊಡ್ಡ ಪ್ರದೇಶದಲ್ಲಿ ಬಿತ್ತನೆ ಸಾಧ್ಯ ಎಂದು ಹೇಳಿದರು.
ಗದ್ದೆ ಅಥವಾ ಹೊಲದಲ್ಲಿ ಸೀಡೋಗ್ರಾಫರ್ ಯಂತ್ರವನ್ನು ಬಳಸುವಾಗ ಅದು ನೇಗಿಲು ರೀತಿಯಲ್ಲಿ ಗದ್ದೆಯನ್ನು ಉಳುಮೆ ಮಾಡಿಕೊಂಡು ಬರುತ್ತದೆ. ಯಂತ್ರದಲ್ಲಿ ಅಳವಡಿಸಿರುವ ಫನೆಲ್ನಲ್ಲಿ ಬೀಜ ತುಂಬಿಸಲಾಗುತ್ತದೆ. ಯಂತ್ರ ಮುಂದುವರಿದಂತೆ ಬೀಜವು ಅದರಿಂದ ಉದುರುತ್ತದೆ. ಅದರ ಜೊತೆಗೆ ಟ್ಯಾಂಕ್ನಲ್ಲಿರುವ ನೀರೂ ಬೀಳುತ್ತದೆ. ಈ ನೀರಿಗೆ ಗೊಬ್ಬರವನ್ನು ಮಿಶ್ರಣ ಮಾಡಿದಲ್ಲಿ ಗಿಡದ ಬೆಳವಣಿಗೆಯೂ ಉತ್ತಮವಾಗುತ್ತದೆ. ಬೀಜ ಹಾಕಿದ ತಕ್ಷಣ ಯಂತ್ರದಲ್ಲಿ ಅಳವಡಿಕೆಯಾಗಿರುವ ಪ್ಲೇಟ್ ಬೀಜದ ಮೇಲೆ ಮಣ್ಣನ್ನು ಮುಚ್ಚಿಕೊಂಡು ಬರುತ್ತದೆ. ಈ ಯಂತ್ರದ ಸಹಾಯದಿಂದ ವಿವಿಧ ವಿನ್ಯಾಸದ ಬೀಜಗಳನ್ನು ಬಿತ್ತನೆ ಮಾಡಬಹುದು. ಈ ರೀತಿಯಲ್ಲಿ ಯಂತ್ರವನ್ನು ಅಭಿವೃದ್ಧಿ ಮಾಡಲಾಗಿದೆ ಎಂದು ರಾಕೇಶ್ ಕೃಷ್ಣ ಮಾಹಿತಿ ನೀಡಿದರು.
3-4 ವರ್ಷಗಳಿಂದ ಈ ಸೀಡೋಗ್ರಾಫರ್ ಯಂತ್ರವನ್ನು ರಾಕೇಶ್ ಕೃಷ್ಣ ಅಭಿವೃದ್ಧಿಪಡಿಸುತ್ತಿದ್ದು, ಏಳನೇ ತರಗತಿಯಿಂದಲೇ ಈ ಯಂತ್ರ ಅಭಿವೃದ್ಧಿ ಕಾರ್ಯವನ್ನು ಕೈಗೊಂಡಿದ್ದರಂತೆ. ಸಹೋದರಿ ರಶ್ಮಿ ಪಾರ್ವತಿ ತಮಗೆ ಸ್ಫೂರ್ತಿಯಾಗಿದ್ದು, ಸೀಡೋಗ್ರಾಫರ್ ಯಂತ್ರ ಅಭಿವೃದ್ಧಿ ಪಡಿಸುವಾಗ ಸಹೋದರಿ ಬಹಳಷ್ಟು ಸಹಕರಿಸಿದ್ದಾರೆ. ಅಲ್ಲದೆ ಹೆತ್ತವರು ಹಾಗೂ ಶಾಲಾ ಕಾಲೇಜಿನ ಅಧ್ಯಾಪಕರು ಮತ್ತು ಈಗಿನ ಕಾಲೇಜಿನ ಪ್ರಾಧ್ಯಾಪಕರ ಸಲಹೆ, ಸಹಕಾರವು ನನ್ನನ್ನು ಇಷ್ಟು ಎತ್ತರಕ್ಕೆ ಬೆಳೆಸಿದೆ ಎಂದು ಹೇಳಿದರು.
ರಾಕೇಶ್ ಕೃಷ್ಣ ತಾಯಿ ಡಾ. ದುರ್ಗಾರತ್ನ ಸಿ. ಮಾತನಾಡಿ, ನನ್ನ ಮಗ 'ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ'ಕ್ಕೆ ಆಯ್ಕೆಯಾಗಿರುವುದು ಬಹಳ ಸಂತಸ ತಂದಿದೆ. ಅದೇ ರೀತಿ ಪ್ರಧಾನಿ ಮೋದಿಯವರೊಂದಿಗೆ ನೇರವಾಗಿ ವರ್ಚುವಲ್ ಮುಖಾಂತರ ಮಾತನಾಡಲು ದೊರಕಿದ್ದು ಅದ್ಭುತ ಅನುಭವವಾಯಿತು. ರಾಕೇಶ್ ಕೃಷ್ಣರ ಈ ಸಂಶೋಧನೆ 'ಏಕ್ ಭಾರತ್ ಶ್ರೇಷ್ಠ ಭಾರತ್' ವಿಚಾರಕ್ಕೆ ಪೂರಕವಾಗಿರಲಿ. ರೈತಾಪಿ ವರ್ಗಕ್ಕೆ ಈ ಯಂತ್ರದಿಂದ ಬಹಳ ಉಪಕಾರವಾಗಲಿ ಎಂದು ಆಶಿಸಿದ್ದಾರೆ.
ಇದನ್ನೂ ಓದಿ:ಹಳೆಯ 100, 10, 5 ರೂ. ನೋಟ್ಗಳ ಡಿಮಾನಿಟೈಸೇಷನ್ ವದಂತಿ: ಈಗ RBI ಹೇಳುವುದೇನು?