ಮಂಗಳೂರು: ಇಂದು ನಾವು ಯಾಂತ್ರೀಕೃತ ಮೀನುಗಾರಿಕೆ ನಡೆಸುತ್ತಿದ್ದೇವೆ. ಆದರೆ, ನಮ್ಮ ಮುಂದಿನ ತಲೆಮಾರಿಗೂ ಮೀನಿನ ಸಂತತಿಯನ್ನು ಉಳಿಸಬೇಕಾದ ಅವಶ್ಯಕತೆ ಇದೆ. ಆದ್ದರಿಂದ ಸಮಗ್ರ ಮೀನುಗಾರಿಕೆ ನೀತಿ ಜಾರಿಗೊಳಿಸಲು ಚಿಂತನೆ ನಡೆಸಲಾಗಿದೆ ಎಂದು ಮುಜರಾಯಿ, ಮೀನುಗಾರಿಕೆ ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ನಗರದ ಬಂದರಿಲ್ಲಿರುವ ಮತ್ಸ್ಯಗಂಧಿ ಸಭಾಭವನದಲ್ಲಿ ಇಂದು ನಡೆದ ಮೀನುಗಾರಿಕಾ ಇಲಾಖೆಯ ಮಾಹಿತಿ ಕಾರ್ಯಾಗಾರ ಹಾಗೂ ಸವಲತ್ತು ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಗ್ರ ಮೀನುಗಾರಿಕೆ ನೀತಿ ಕರಡು ಸ್ಥಿತಿಯಲ್ಲಿದ್ದು, ಇದರ ಸಾಧಕ-ಬಾಧಕಗಳನ್ನು ಚರ್ಚೆ ನಡೆಸಿ ಮುಂದಿನ ಬಜೆಟ್ ನಲ್ಲಿ ಜಾರಿಗೊಳಿಸಲಾಗುವುದು. ಅದರಲ್ಲಿ ಸಮುದ್ರ ಕಿನಾರೆ ಮೀನುಗಾರಿಕೆ, ಒಳನಾಡು ಮೀನುಗಾರಿಕೆ ಸೇರಿದಂತೆ ಎಲ್ಲಾ ರೀತಿಯ ಮೀನುಗಾರಿಕೆಗೆ ಸರಕಾರ ಪ್ರೋತ್ಸಾಹ ನೀಡುತ್ತಿದೆ ಎಂದು ಹೇಳಿದರು.
ಕಳೆದ 2017-18ರಲ್ಲಿ ಐದು ಲಕ್ಷ ಬೂತಾಯಿ ಮೀನು ದೊರಕಿದೆ ಎಂದು ವರದಿ ಹೇಳಿತ್ತು. ಅದರ ಮರುವರ್ಷವೇ ಅದು ಕೇವಲ ಒಂದು ಲಕ್ಷಕ್ಕೆ ಇಳಿದಿದೆ. ಆದ್ದರಿಂದ ಮೀನಿನ ಉತ್ಪಾದನೆ, ಮಾರಾಟ, ಸಂರಕ್ಷಣೆ ಯಾವ ರೀತಿ ಮಾಡಬೇಕೆಂದು ಚರ್ಚೆ ಮಾಡಬೇಕಾಗಿದೆ. ಕಳೆದ ಬಜೆಟ್ ನಲ್ಲಿ ತೇಲುವ ಜಟ್ಟಿ ನಿರ್ಮಾಣಕ್ಕೆ ಅನುದಾನ ತೆಗೆದಿರಿಸಲಾಗಿದೆ. ಈ ಜಟ್ಟಿ ನಿರ್ಮಾಣವಾದಲ್ಲಿ ಹೆಚ್ಚಿನ ಸಮಸ್ಯೆಗಳು ನಿವಾರಣೆಯಾಗಲಿವೆ. ಈ ಬಗ್ಗೆ ಎರಡೂ ಜಿಲ್ಲೆಗಳ ಆಯ್ದ ಪ್ರಮುಖರ, ಗುತ್ತಿಗೆದಾರರ, ಅಧಿಕಾರಿಗಳ ಜೊತೆಯಲ್ಲಿ ಒಂದು ಚರ್ಚೆ ನಡೆಸಿದ್ದೇವೆ. ಇವರು ಗೋವಾದ ತೇಲುವ ಜಟ್ಟಿಗಳನ್ನು ನೋಡಲು ಜಿಲ್ಲೆಯ ಅಧಿಕಾರಿಗಳು, ಮೀನುಗಾರರು, ತಂತ್ರಜ್ಞರೊಂದಿಗೆ ತೆರಳಲಿದ್ದಾರೆ. ಆ ಬಳಿಕ ತೇಲುವ ಜಟ್ಟಿ ನಿರ್ಮಾಣದ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ. ಮಂಗಳೂರು ಹಾಗೂ ಉಡುಪಿಯಲ್ಲಿ ತೇಲುವ ಜಟ್ಟಿ ನಿರ್ಮಾಣಕ್ಕೆ ತಲಾ ಆರುವರೆ ಕೋಟಿ ರೂ. ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.
ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಕಾರ್ಯಾಚರಿಸುತ್ತಿರುವ ಮತ್ಸ್ಯದರ್ಶಿನಿ ಹೊಟೇಲನ್ನು ರಾಜ್ಯದ 11ಜಿಲ್ಲೆಗಳಿಗೆ ವಿಸ್ತರಿಸಲಾಗುವುದು. ಈ ಮೂಲಕ ಐಶಾರಾಮಿ ಹೊಟೇಲ್ ಗಳಲ್ಲಿ ಸಾವಿರ ರೂಪಾಯಿಗೆ ದೊರಕುವ ಅಂಜಲ್ ಮತ್ತು ಇತರೆ ಮೀನುಗಳನ್ನು ಕೇವಲ ನೂರು ರೂಪಾಯಿಗೆ ಒದಗಿಸಲಾಗುವುದು. ಆದ್ದರಿಂದ ರಾಜ್ಯದ ಎಲ್ಲಾ ಜನತೆ ಸುಲಭ ದರದಲ್ಲಿ ಮೀನು ಖಾದ್ಯ ಸವಿಯುವ ವ್ಯವಸ್ಥೆ ಮಾಡಲಾಗುವುದು ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಈ ಸಂದರ್ಭ 80 ಲಕ್ಷ ರೂಪಾಯಿ ಮೌಲ್ಯದ ಕಾರ್ಡೆನ್ ಬಲೆಗಳನ್ನು 800 ಮೀನುಗಾರಿಕಾ ಫಲಾನುಭವಿಗಳಿಗೆ ವಿತರಿಸಲಾಯಿತು.