ಮಂಗಳೂರು (ದಕ್ಷಿಣ ಕನ್ನಡ) : ನಾಳೆ ನಾಡಿನೆಲ್ಲೆಡೆ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮಾಚರಣೆಗೆ ಸಿದ್ದತೆ ನಡೆಯುತ್ತಿದೆ. ಅದರಲ್ಲೂ ಕರಾವಳಿ ಜಿಲ್ಲೆಗಳಾದ ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಹಬ್ಬಕ್ಕೆ ಸಾಮಗ್ರಿಗಳ ಖರೀದಿ ಜೋರಾಗಿದೆ. ಎರಡು ಜಿಲ್ಲೆಗಳಲ್ಲಿಯೂ ಅಷ್ಟಮಿ ಭಿನ್ನವಾಗಿ ನಡೆಯುತ್ತದೆ. ಉಡುಪಿಯಲ್ಲಿ ಶ್ರೀ ಕೃಷ್ಣ ಮಠವನ್ನು ಕೇಂದ್ರೀಕರಿಸಿ ಅಷ್ಟಮಿ ಆಚರಣೆ ಇದ್ದರೆ, ದಕ್ಷಿಣ ಕನ್ನಡದಲ್ಲಿ ಮನೆ ಮನೆಗಳಲ್ಲಿ ಅಷ್ಟಮಿಯ ಸಂಭ್ರಮ ನಡೆಯುತ್ತದೆ.
ಈಗಾಗಲೇ ದಕ್ಷಿಣ ಕನ್ನಡದಲ್ಲಿ ಅಷ್ಟಮಿಗೆ ಮೂಡೆ/ಕೊಟ್ಟಿಗೆ/ ಗುಂಡ ತಿಂಡಿಗೆ ಎಲೆ ಕಟ್ಟುವುದು, ದೇವರ ಅಲಂಕಾರ ಮಾಡುವುದಕ್ಕೆ ಸಿದ್ಧತೆ ನಡೆಯುತ್ತಿದೆ. ನಗರದ ಕಾರ್ ಸ್ಟ್ರೀಟ್ ನಲ್ಲಿ ಮಹಿಳೆಯರು ಮೂಡೆ, ಕೊಟ್ಟಿಗೆ, ಗುಂಡ ಎಲೆ ಕಟ್ಟಿ ಮಾರಿದರೆ, ಘಟ್ಟದ ಮೇಲಿನಿಂದ ಬಂದ ವ್ಯಾಪಾರಿಗಳು ಹೂವಿನ ಮಾರಾಟದಲ್ಲಿ ತೊಡಗಿದ್ದಾರೆ.
ಅಷ್ಟಮಿ ದಿನ ಸಸ್ಯಹಾರದ ಊಟ ಮಾಡಲಾಗುತ್ತದೆ. ಕಡ್ಲೆ ಬೀಜ ಪದಾರ್ಥ, ಹೆಸರು ಅಲೂಗಡ್ಡೆ ಪದಾರ್ಥ, ಕೆಸುವಿನ ಎಲೆ ಅರಿವೆ ಅಂಬಡೆ ಕಾಯಿಯ ಮಿಶ್ರಣದ ಸಾಂಬಾರ್, ಬೆಂಡೆಕಾಯಿ ಅಂಬಡೆ ಗಸಿ, ಅನ್ನ, ಪಾಯಸ ಗಳನ್ನು ಸವಿಯಲಾಗುತ್ತದೆ. ಸಂಜೆ ಮೂಡೆ, ಕೊಟ್ಟಿಗೆ, ಗುಂಡ ಎಂಬ ಅಕ್ಕಿಯಿಂದ ತಯಾರಿಸಿದ ತಿಂಡಿಯನ್ನು ಬೆಲ್ಲ ಹಾಕಿದ ತೆಂಗಿನಹಾಲಿನೊಂದಿಗೆ ತಿನ್ನುತ್ತಾರೆ.
ಅಷ್ಟಮಿ ದಿನವೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಷ್ಟಮಿ ಸಂಭ್ರಮಾಚರಣೆಯಾಗಿ ಮೊಸರು ಕುಡಿಕೆ ಉತ್ಸವ ನಡೆಯುತ್ತದೆ. ಬಣ್ಣಗಳ ನೀರನ್ನು ಹಾಕಿದ ಮಡಕೆಗಳನ್ನು ಎತ್ತರದಲ್ಲಿ ಕಟ್ಟಿ ಅದನ್ನು ಯುವಕರು ಒಬ್ಬರ ಮೇಲೊಬ್ಬರು ಹತ್ತಿ ಒಡೆಯುವ ಈ ಉತ್ಸವ ಮಂಗಳೂರಿನಲ್ಲಿ ಸಂಭ್ರಮದಿಂದ ನಡೆಯುತ್ತದೆ.
ಇನ್ನು ಅಷ್ಟಮಿಯ ಪ್ರಯುಕ್ತ ಮಂಗಳೂರಿನಲ್ಲಿ ಪ್ರತಿವರ್ಷ ಮುದ್ದು ಕೃಷ್ಣ ವೇಷ ಸ್ಪರ್ಧೆ ನಡೆಯುತ್ತದೆ. ಕಲ್ಕೂರ ಪ್ರತಿಷ್ಠಾನದಿಂದ ನಡೆಯುವ ಮುದ್ದು ಕೃಷ್ಣ ವೇಷ ಸ್ಪರ್ಧೆಯಲ್ಲಿ ಸಾವಿರಾರು ಮಕ್ಕಳು ಭಾಗವಹಿಸುತ್ತಾರೆ. ಮಂಗಳೂರಿನ ಹೆಚ್ಚಿನ ಪುಟಾಣಿಗಳಿಗೆ ಕೃಷ್ಣನ ವೇಷ ಹಾಕಿ ಸ್ಪರ್ಧೆ ನಡೆಸಲಾಗುತ್ತಿದೆ. ಅಷ್ಟಮಿಯ ಮರುದಿನ (ದ್ವಾದಶ) ದಂದು ಮಾಂಸಹಾರಿಗಳು ಮನೆಯಲ್ಲಿ ಮಾಂಸಾಹಾರ ಮಾಡಿ ಸಂಭ್ರಮಿಸುತ್ತಾರೆ.
ಇನ್ನು ಉಡುಪಿಯಲ್ಲಿ ಅಷ್ಟಮಿಯ ಆಚರಣೆ ಮಂಗಳೂರಿಗಿಂತ ಭಿನ್ನವಾಗಿರುತ್ತದೆ. ಉಡುಪಿಯಲ್ಲಿ ಶ್ರೀಕೃಷ್ಣ ದೇವಸ್ಥಾನದಲ್ಲಿ ಜನ್ಮಾಷ್ಟಮಿ ಸಂಭ್ರಮದಿಂದ ನಡೆಯುತ್ತದೆ. ಮಠಕ್ಕೆ ಮುಂಜಾನೆಯಿಂದಲೇ ಸಾವಿರಾರು ಭಕ್ತರು ದೇವರ ದರ್ಶನಕ್ಕೆ ಬರುತ್ತಾರೆ. ಉಡುಪಿಯಲ್ಲಿ ಹೆಚ್ಚಿನವರು ಶ್ರೀ ಕೃಷ್ಣ ಜನ್ಮಾಷ್ಟಮಿ ದಿನ ಉಪವಾಸದಿಂದ ಇರುತ್ತಾರೆ. ರಾತ್ರಿ 12 ಗಂಟೆ ಸುಮಾರಿಗೆ ಅರ್ಘ್ಯ ಪ್ರದಾನ ನಡೆಯಲಿದ್ದು, ಆ ಬಳಿಕ ಫಲಾಹಾರ ಸೇವನೆ ಮಾಡುತ್ತಾರೆ.
ಅಷ್ಟಮಿ ಮರುದಿನ ಉಡುಪಿ ಶ್ರೀಕೃಷ್ಣ ಮಠದಲ್ಲಿ ವಿಟ್ಲಪಿಂಡಿ ನಡೆಯುತ್ತದೆ. ಇಲ್ಲಿ ಅಷ್ಟಮಿಗೆ ಪೂಜಿಸಲಾದ ಕಡೆಗೋಲು ಕೃಷ್ಣನ ಮೃಣ್ಮಯ ಮೂರ್ತಿಯನ್ನು ಉಡುಪಿ ರಥಬೀದಿಯಲ್ಲಿ ಮೆರವಣಿಗೆ ಮಾಡಿ ಜಲಸ್ತಂಭನ ಮಾಡಲಾಗುತ್ತದೆ. ಈ ಮೆರವಣಿಗೆಯಲ್ಲಿ ಆಕರ್ಷಕ ಹುಲಿವೇಷಗಳು, ಟ್ಯಾಬ್ಲೋಗಳು, ವೇಷಧಾರಿಗಳು ಗಮನ ಸೆಳೆಯುತ್ತಾರೆ. ಈ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗವಹಿಸಿ ಸಂಭ್ರಮಿಸುತ್ತಾರೆ. ಮತ್ತೊಂದೆಡೆ ಮಠದಲ್ಲಿ ಭಕ್ತರಿಗೆ ನೀಡುವ ಉಂಡೆ ಚಕ್ಕುಲಿ ಪ್ರಸಾದದ ತಯಾರಿ ಆಗಿದೆ. ಶ್ರೀಕೃಷ್ಣ ಮಠವನ್ನು ಸಿಂಗರಿಸಲಾಗಿದ್ದು, ವಿಟ್ಲ ಪಿಂಡಿಗೂ ತಯಾರಿ ನಡೆಸಲಾಗಿದೆ.
ಇದನ್ನೂ ಓದಿ : Mysore Dussehra: ಮೈಸೂರು ದಸರಾ ಮಹೋತ್ಸವದ ಗಜಪಡೆಗೆ ಪೂಜೆ.. ಅರಮನೆಗೆ ಅದ್ಧೂರಿ ಸ್ವಾಗತ..