ಮಂಗಳೂರು: ಐವನ್ ಡಿಸೋಜಾ ಅವರು ಈಗಾಗಲೇ ಸರಿದು ಹೋಗಿದ್ದು, ಇದೇ ರೀತಿ ಮಾತನಾಡಿದ್ದಲ್ಲಿ ಮುಂದಿನ ದಿನಗಳಲ್ಲಿ ಐ ಹೋಗಿ ವನ್ ಮಾತ್ರ ಆಗುವ ಸಾಧ್ಯತೆ ಇದೆ ಎಂದು ವಜ್ರದೇಹಿ ಮಠದ ಶ್ರೀರಾಜಶೇಖರಾನಂದ ಸ್ವಾಮೀಜಿ ವ್ಯಂಗ್ಯವಾಡಿದ್ರು.
ಇತ್ತೀಚೆಗೆ ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜಾ ಅವರು ಕೇಸರಿ ಬಟ್ಟೆಯ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಈ ಕುರಿತು ಮಾತನಾಡಿದ ಸ್ವಾಮೀಜಿ, ನಾಳೆ ದಿನ ಐವನ್ ಡಿಸೋಜಾ ಅವರನ್ನು ಮೂಸಿ ನೋಡುವವರು ಇಲ್ಲದಂತಾಗಬಹುದು. ಈಗಲೇ ಅವರು ಕಣ್ತೆರೆಯಲಿ. ಅವರು ಯಾವ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೋ ಅದೇ ಪಕ್ಷ ಮುಳುಗುತ್ತಿದೆ. ಅದರ ಜತೆ ಇವರೂ ಮುಳುಗಲಿದ್ದಾರೆ ಎಂದು ಕುಹುಕವಾಡಿದರು.
ಅವರು ಯಾರನ್ನು ವಿವಾಹವಾಗಿದ್ದಾರೋ ಅದನ್ನು ಒಮ್ಮೆ ಗಮನಿಸಲಿ. ಅವರು ಯಾವ ಕೇಸರಿಯ ಬಣ್ಣದ ಬಗ್ಗೆ ಮಾತನಾಡಿದ್ದಾರೋ ಅದೇ ಕೇಸರಿಯ ಹೆಣ್ಣನ್ನೇ ಅವರು ವಿವಾಹವಾಗಿದ್ದಾರೆ. ಮತಾಂತರ ಅಲ್ಲಿಯೇ ನಡೆದಿದೆ. ಮುಂದೆ ಅವರು ಮಾತನಾಡುವಾಗ ಜಾಗ್ರತೆಯಿಂದಿರುವುದು ಒಳಿತು ಎಂದರು.
ನೈತಿಕ ಪೊಲೀಸ್ ಗಿರಿ ಸಮರ್ಥಿಸಿದ ಶ್ರೀ
ನೈತಿಕ ಪೊಲೀಸ್ ಗಿರಿಯ ಬಗ್ಗೆ ಮಾತನಾಡಿದ ಅವರು, ಕ್ರಿಯೆಗೆ ಪ್ರತಿಕ್ರಿಯೆ ಆಗುತ್ತಿದೆಯೇ ವಿನಃ ಕ್ರಿಯೆಯಿಲ್ಲದೆ ಪ್ರಕ್ರಿಯೆ ಆಗುತ್ತಿಲ್ಲ. ನೆಗೆಟಿವ್ ಆದಲ್ಲಿ ಸಮಸ್ಯೆಯಿಲ್ಲ. ಪಾಸಿಟಿವ್ಗೆ ಸಂಘರ್ಷ ಆದಾಗ ಮಾತ್ರ ಅದು ಕೆಣಕುತ್ತದೆ. ನಮ್ಮ ಧರ್ಮವನ್ನು ಕೆಣಕಿದಾಗ ನಾವು ವಿರೋಧಿಸಿದ್ದೇವೆಯೇ ಹೊರತು ವಿನಾ ಕಾರಣ ಅವರನ್ನು ಕೆಣಕಿಲ್ಲ ಎಂದು ನೈತಿಕ ಪೊಲೀಸ್ ಗಿರಿಯನ್ನು ಸಮರ್ಥಿಸಿಕೊಂಡಿದ್ದರು.
ನೈತಿಕ ಪೊಲೀಸ್ ಗಿರಿಯನ್ನು ಪ್ರಶ್ನಿಸುವವರೇ ಕಾನೂನಿನ ವಿರೋಧವಾಗಿ ಹೋಗಿರುವವರು. ಪ್ರೀತಿ-ಪ್ರೇಮದ ವಿಚಾರದಲ್ಲಿ ಯಾಕೆ ಹಿಂದೂ ಹುಡುಗಿಯರನ್ನು ಇವರು ಎತ್ತಾಕ್ಕೊಂಡ್ ಹೋಗ್ಬೇಕು. ಇವರದ್ದೇ ಮತ-ಧರ್ಮವನ್ನು ಅವಲಂಬಿಸಲಿ, ನಮಗೇನು ಸಮಸ್ಯೆಗಳಿಲ್ಲ ಎಂದರು.