ಮಂಗಳೂರು: ಭಗವಾನ್ ಶ್ರೀಕೃಷ್ಣ ತನ್ನ ಬಾಲ್ಯದಲ್ಲಿ ಗೋಪಿಕೆಯರ ಮೊಸರು ಗಡಿಗೆಗಳನ್ನು ಒಡೆದು ಬೆಣ್ಣೆ, ಮೊಸರು ಕದ್ದು ತಿಂದ ನೆನಪಿಗಾಗಿ ಇಂದಿಗೂ ಕರಾವಳಿಯಾದ್ಯಂತ ಶ್ರೀಕೃಷ್ಣ ಜನ್ಮಾಷ್ಠಮಿ ವೇಳೆ ಮೊಸರು ಕುಡಿಕೆ ಉತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ.
ಶನಿವಾರ ಸಂಜೆ ಮಂಗಳೂರಿನ ಕದ್ರಿ ಕಂಬಳ, ಅತ್ತಾವರ, ಉರ್ವಸ್ಟೋರ್, ಬಂದರ್ ರಸ್ತೆ, ಕಾವೂರು ಮುಂತಾದ ಕಡೆಗಳಲ್ಲಿ ಸಂಭ್ರಮದಿಂದ ಮೊಸರು ಕುಡಿಕೆ ಉತ್ಸವ ನಡೆಯಿತು. ಸಾವಿರಾರು ಜನರು ಈ ಮೊಸರು ಕುಡಿಕೆ ಉತ್ಸವದಲ್ಲಿ ಭಾಗವಹಿಸಿ ಸಂಭ್ರಮಿಸಿದ್ದಾರೆ.
ಮಾನವ ಪಿರಮಿಡ್ ಮೂಲಕ ಎತ್ತರದಲ್ಲಿ ಕಟ್ಟಲಾಗಿರುವ ಮಡಿಕೆಗಳನ್ನು ಒಡೆಯುವುದೇ ಮೊಸರು ಕುಡಿಕೆ ಉತ್ಸವದ ಮುಖ್ಯ ಆಕರ್ಷಣೆ. ಕಿಲೋ ಮೀಟರ್ ಗಟ್ಟಲೆ ಉದ್ದಕ್ಕೂ ಈ ಮಡಿಕೆಗಳನ್ನು ಕಟ್ಟಲಾಗುತ್ತದೆ. ನಿರ್ದಿಷ್ಟ ತಂಡ ತಮ್ಮ ಚಾಕಚಕ್ಯತೆಯಿಂದ ಮಡಿಕೆಗಳನ್ನು ಒಡೆದು ಜನರನ್ನು ರಂಜಿಸುತ್ತಾರೆ.
ಏನಿದು ಮೊಸರು ಕುಡಿಕೆ?
ಗರಿಷ್ಠ 14 ಮೀ. ಎತ್ತರಕ್ಕೆ ಕಂಬಗಳ ಆಧಾರದ ಮೂಲಕ ಮಡಿಕೆಗಳನ್ನು ಕಟ್ಟಲಾಗುತ್ತದೆ. ಒಂದು ಕಂಬದಲ್ಲಿ ಸುಮಾರು 25 ರಿಂದ 100 ಕ್ಕೂ ಅಧಿಕ ಮಡಿಕೆಗಳನ್ನು ಕಟ್ಟುವುದು ಇದೆ. ಸಾಮಾನ್ಯವಾಗಿ ಈ ಮಡಿಕೆಗಳಲ್ಲಿ ಮೊಸರು, ಹಾಲು, ತುಪ್ಪ, ಬೆಣ್ಣೆ ಇಡುವುದು ಪದ್ಧತಿ. ಆದರೆ ದುಬಾರಿ ವೆಚ್ಚ ಹಾಗೂ ವೃಥಾ ಪೋಲು ಎಂಬ ಉದ್ದೇಶಕ್ಕೆ ಮಡಿಕೆಯೊಳಗೆ ರಾಸಾಯನಿಕ ಮಿಶ್ರಣ ವಲ್ಲದ ವಿವಿಧ ಬಣ್ಣಗಳ ಹುಡಿ, ನೀರು, ಹೂವಿನ ಎಸಳುಗಳನ್ನು ಇಡಲಾಗುತ್ತದೆ. ನಿರ್ದಿಷ್ಟ ತಂಡ ಮೂರು ಹಂತದಲ್ಲಿ ಮಾನವ ಪಿರಮಿಡ್ ರಚಿಸಿ ಈ ಮಡಿಕೆಗಳನ್ನು ಒಡೆದು ಜನರನ್ನು ರಂಜಿಸುತ್ತವೆ. ತಂಡವು ಹೆಚ್ಚೆಂದರೆ ಅರ್ಧಗಂಟೆಯೊಳಗೆ ಒಂದು ಹಂತದ ಎಲ್ಲಾ ಮಡಿಕೆಗಳನ್ನು ಒಡೆಯಬೇಕು ಎಂಬ ನಿಯಮವಿರುತ್ತದೆ.
ಸಂಜೆಗೆ ಆರಂಭವಾದರೆ ಸುಮಾರು ನಡುರಾತ್ರಿವರೆಗೂ ಈ ಮೊಸರು ಕುಡಿಕೆ ಉತ್ಸವ ಮುಂದುವರೆಯುತ್ತದೆ. ಜನರೂ ಈ ಸಂಭ್ರಮದಲ್ಲಿ ಭಾಗವಹಿಸಿ ಕೃಷ್ಣನ ಬಾಲ್ಯದ ಲೀಲೆಗಳನ್ನು ನೆನಪಿಸಿಕೊಳ್ಳುತ್ತಾರೆ.