ಪುತ್ತೂರು: ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ನಿರ್ಮಾಣದ ಕುರಿತು ಜಾಗೃತಿ ಮೂಡಿಸಲು ದೇಶದ್ಯಾಂತ ರಥಯಾತ್ರೆ ನಡೆದ ಸಂದರ್ಭ ಶ್ರೀ ರಾಮಮಂದಿರ ನಿರ್ಮಾಣದ ಹೋರಾಟದಲ್ಲಿ ಆಯೋಧ್ಯೆಗೆ ತೆರಳಿದ್ದ ಕರಸೇವಕರನ್ನು ಗುರುತಿಸಿ ಅವರನ್ನು ಗೌರವಿಸುವ ಕಾರ್ಯಕ್ರಮ ಪುತ್ತೂರು ಬಿಜೆಪಿ ಮಂಡಲದ ವತಿಯಿಂದ ನಡೆಯಿತು.
ಕರಸೇವೆಯಲ್ಲಿ ಭಾಗಿಯಾದವರ ಪೈಕಿ ಮಾಜಿ ಪುರಸಭಾ ಅಧ್ಯಕ್ಷ ರಾಜೇಶ್ ಬನ್ನೂರು, ಪುತ್ತೂರು ಕೋ ಆಪರೆಟೀವ್ ಟೌನ್ ಬ್ಯಾಂಕ್ ನಿರ್ದೇಶಕ ಚಂದ್ರಶೇಖರ ರಾವ್ ಬಪ್ಪಳಿಗೆ, ವಿಶ್ವನಾಥ ಕುಲಾಲ್, ಯೋಗೀಶ್ ಭಕ್ತ, ವೆಂಕಟ್ರಮಣ ಗೌಡ, ಅಶೋಕ್ ರಾಜ್, ನಿರ್ಮಲ, ಪುರಸಭೆ ಮಾಜಿ ಅಧ್ಯಕ್ಷ ಲೋಕೇಶ್ ಹೆಗ್ಡೆ, ಶೇಖರ ನಾರಾವಿ, ರಾಮಚಂದ್ರ ಗೌಡ ಬೊಳ್ವಾರು, ಶಿಲ್ಪಿ ಗುಣವಂತೇಶ್ವರ ಭಟ್ ಅವರನ್ನು ಬಿಜೆಪಿ ವತಿಯಿಂದ ಸನ್ಮಾನಿಸಲಾಯಿತು.
ಶ್ರೀರಾಮನ ಮೂಲಕ ಆಧ್ಯಾತ್ಮಿಕ ಸ್ವಾತಂತ್ರ್ಯ:
ಶಾಸಕ ಸಂಜೀವ ಮಠಂದೂರು ಮಾತನಾಡಿ, ಶ್ರೀ ರಾಮನ ಆದರ್ಶಗಳನ್ನು ಮತ್ತೊಮ್ಮೆ ಜಗತ್ತಿಗೆ ಪರಿಚಯಿಸುವ ಕೆಲಸ ರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡುವ ಮೂಲಕ ನೆರವೇರಿದ್ದು, ದೇಶಕ್ಕೆ 2ನೇ ಆಧ್ಯಾತ್ಮ ಸ್ವಾತಂತ್ರ್ಯ ಲಭಿಸಿದೆ ಎಂದು ಹೇಳಿದರು. 130 ಕೋಟಿ ಜನ ಜಾತಿ, ಧರ್ಮ ಬಿಟ್ಟು ದೇಶದ ಶ್ರದ್ದಾ ಬಿಂದು ರಾಮನ ಆದರ್ಶಗಳನ್ನು ನೆನಪಿಸುವುದು ಇವತ್ತಿನ ಕಾರ್ಯಕ್ರಮವಾಗಿದೆ. ಈ ಆದ್ಯಾತ್ಮಿಕ ಹೋರಾಟದಲ್ಲಿ ಹಿಂದೆ ಮುಂದೆ ನೋಡದೆ ಸಮರ್ಪಣಾ ಮನೋಭಾವದಿಂದ ಹೋರಾಟ ಮಾಡಿದವರು ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ. ಯುವ ಪೀಳಿಗೆ ಇದನ್ನು ಮೈಗೂಡಿಸಬೇಕೆಂದು ಹೇಳಿದರು.
ಅಯೋಧ್ಯೆಯಲ್ಲಿ ಸ್ವರ್ಗ ನಿರ್ಮಾಣ:
ಸಫಾಯಿ ಕರ್ಮಚಾರಿ ಆಯೋಗದ ಸದಸ್ಯರಾಗಿರುವ ಬಿಜೆಪಿ ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮಣಿ ಅವರು ಮಾತನಾಡಿ ಅಯೋಧ್ಯೆಯ ಶ್ರೀರಾಮನ ಮಂದಿರ ನಿರ್ಮಾಣ ಕಾರ್ಯಕ್ಕಾಗಿ ಹಲವಾರು ಮಂದಿ ಬಲಿದಾನ ಮಾಡಿದ್ದಾರೆ. ಎಲ್ಲಾ ಆಂದೋಲನಕ್ಕೆ ಪ್ರೇರಕ ಶಕ್ತಿಯಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವಾಗಿತ್ತು. ಸುದೈವ ಎಂಬಂತೆ ನಾವು ಜೀವಂತವಾಗಿರುವ ಸಂದರ್ಭದಲ್ಲೇ ರಾಮ ಮಂದಿರ ನೋಡುವ ಭಾಗ್ಯ ಒದಗಿದೆ ಎಂದರು.