ಮಂಗಳೂರು: ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂದು ಲೋಕಕ್ಕೆ ಸಾರಿದ ವಿಶ್ವಮಾನವತೆಯ ಹರಿಕಾರ ಬ್ರಹ್ಮಶ್ರೀ ನಾರಾಯಣ ಗುರುಗಳ 166 ನೇ ಜನ್ಮದಿನವಾದ ಇಂದು ಶ್ರೀಕ್ಷೇತ್ರ ಕುದ್ರೋಳಿಯಲ್ಲಿ ನಾರಾಯಣ ಗುರುಗಳ ಮೂರ್ತಿಗೆ ವಿಶೇಷ ಪೂಜೆ ನೆರವೇರಿತು.
ಕೇರಳದ ಚೆಂಬಳತಿ ಎಂಬ ಹಳ್ಳಿಯಲ್ಲಿ ಈಳವ ಕುಟುಂಬದಲ್ಲಿ ಕ್ರಿ.ಶ. 1856ರಲ್ಲಿ ಜನಿಸಿದ ಬ್ರಹ್ಮಶ್ರೀ ನಾರಾಯಣ ಗುರುಗಳು, ಶೂದ್ರ ವರ್ಗದ ಜನರಿಗೆ ದೇವಾಲಯ ಪ್ರವೇಶವಿರದ ಕಾಲದಲ್ಲಿ ಎಲ್ಲಾ ವರ್ಗಗಳಿಗೂ ದೇವಾಲಯ ಪ್ರವೇಶಕ್ಕೆ ಅನುವು ಮಾಡಿಕೊಡುವಂತೆ ಕರ್ನಾಟಕ, ಕೇರಳ, ತಮಿಳುನಾಡು ಹಾಗೂ ಶ್ರೀಲಂಕಾದಲ್ಲಿ ಒಟ್ಟು 43ಕ್ಕೂ ಅಧಿಕ ದೇವಾಲಯಗಳನ್ನು ನಿರ್ಮಿಸಿದ್ದಾರೆ. ಈ ಮೂಲಕ ಎಲ್ಲಾ ಜನಾಂಗದವರಿಗೂ ದೇವಾಲಯ ಪ್ರವೇಶಕ್ಕೆ ಮುಕ್ತ ಅವಕಾಶ ನೀಡಿದರು. ಇಂತಹ ದೇವಾಲಯಗಳಲ್ಲಿ ಕುದ್ರೋಳಿಯ ಶ್ರೀ ಗೋಕರ್ಣನಾಥ ದೇವಾಲಯವೂ ಒಂದು.
ಮಂಗಳೂರಿನ ಹೊಯಿಗೆ ಬಜಾರ್ನಲ್ಲಿದ್ದ ಶ್ರೀಮಂತ ವ್ಯಾಪಾರಿ ಕೊರಗಪ್ಪ ಎಂಬವರು ಶೆಡ್ಡೆ ಸೋಮಯ್ಯ ಮೇಸ್ತ್ರಿ, ಐತಪ್ಪ ಮೇಸ್ತ್ರಿ, ಅಮ್ಮಣ್ಣ ಮೇಸ್ತ್ರಿ ಹಾಗೂ ಗುತ್ತಿಗೆದಾರ ದೂಮಪ್ಪ ಎಂಬ ಬಿಲ್ಲವ ಮುಖಂಡರೊಂದಿಗೆ ಕೇರಳಕ್ಕೆ ತೆರಳಿ ಮಂಗಳೂರಿನಲ್ಲಿಯೂ ಬಿಲ್ಲವರ ಪ್ರವೇಶಕ್ಕೆ ದೇವಾಲಯ ನಿರ್ಮಿಸಿಕೊಡಬೇಕೆಂದು ಬಿನ್ನವಿಸಿಕೊಂಡರು. ಈ ಬಿಲ್ಲವ ಮುಖಂಡರ ಮನವಿಯ ಮೇರೆಗೆ 1908ರಲ್ಲಿ ಮಂಗಳೂರಿಗೆ ಆಗಮಿಸಿದ ನಾರಾಯಣ ಗುರುಗಳು, ಕುದ್ರೋಳಿಯ ಈಗ ದೇವಾಲಯ ಇರುವ ಸ್ಥಳದಲ್ಲಿ ಶಿವ ದೇಗುಲ ನಿರ್ಮಾಣಕ್ಕೆ ಸೂಕ್ತವಾದ ಸ್ಥಳವೆಂದು ಹೇಳಿ ಗರ್ಭಗುಡಿ ಹಾಗೂ ತೀರ್ಥಬಾವಿಗೆ ಸ್ಥಳ ಗುರುತಿಸಿಕೊಟ್ಟರು. ಅಲ್ಲಿ ಮುಳಿಹುಲ್ಲಿನ ಮೇಲ್ಛಾವಣಿಯೊಂದಿಗೆ ಸಣ್ಣ ದೇಗುಲ ನಿರ್ಮಾಣ ಮಾಡಿ ಶಿವನ ಭಾವಚಿತ್ರ ಪ್ರತಿಷ್ಠಾಪಿಸಿದರು.
ಮುಂದಕ್ಕೆ 1912ರಲ್ಲಿ ದೇಗುಲ ಸಂಪೂರ್ಣವಾಗಿ ನಿರ್ಮಾಣಗೊಂಡು ನಾರಾಯಣ ಗುರುಗಳೇ ಕುದ್ರೋಳಿ ಗೋಕರ್ಣನಾಥ ದೇವಾಲಯದಲ್ಲಿ ಶಿವಲಿಂಗ ಪ್ರತಿಷ್ಠಾಪಿಸಿ ತುಳುನಾಡಿನಲ್ಲಿ ಎಲ್ಲರಿಗೂ ಮುಕ್ತ ಪ್ರವೇಶಕ್ಕೆ ಅನುವು ಮಾಡುವ ದೇವಾಲಯ ಸ್ಥಾಪಿಸಿದರು. ಈ ಮೂಲಕ ಶೂದ್ರ ವರ್ಗಕ್ಕೂ ಧಾರ್ಮಿಕ ಅವಕಾಶ ಸ್ಥಾನಮಾನ ಒದಗಿಸಿದ ಮಹಾನ್ ಹರಿಕಾರರಾದರು. ಆ ಬಳಿಕ ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿಯವರ ನೇತೃತ್ವದಲ್ಲಿ 1991ರಂದು ಮತ್ತೆ ದೇವಾಲಯ ಪುನರ್ನಿಮಾಣಗೊಂಡಿತು. ಇದೀಗ ದೇಶ-ವಿದೇಶಗಳ ಭಕ್ತರು ಹಾಗೂ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ದ.ಕ.ಜಿಲ್ಲೆಯ ಪ್ರಸಿದ್ಧ ದೇವಾಲಯವಾಗಿ ಕುದ್ರೋಳಿ ಕಂಗೊಳಿಸುತ್ತಿದೆ.