ಮಂಗಳೂರು: ಕಾಫಿ ಡೇ ಎಂಡಿ ಸಿದ್ಧಾರ್ಥ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸುವಂತೆ ಡಿಜಿ ನೀಲಮಣಿ ರಾಜುಗೆ ಸಿಎಂ ಬಿಎಸ್ವೈ ಸೂಚನೆ ನೀಡಿದ ಹಿನ್ನೆಲೆ ಡಿಜಿ ಮಂಗಳೂರು ಕಮಿಷನರ್ಗೆ ವಿಶೇಷ ತಂಡ ರಚಿಸಿ ತನಿಖೆ ಕೈಗೊಳ್ಳುವಂತೆ ಆದೇಶಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ವಿಶೇಷ ತಂಡ ರಚಿಸಿಕೊಂಡು ಸಿದ್ದಾರ್ಥ್ಗಾಗಿ ಶೋಧಕಾರ್ಯ ಮುಂದುವರೆದಿದೆ. ಈಗಾಗಲೇ ಮನೆಗೆ ಹಲವು ರಾಜಕೀಯ ಮುಖಂಡರು ಎಸ್. ಎಂ.ಕೃಷ್ಣ ಅವರನ್ನು ಭೇಟಿ ಮಾಡಲು ಬರುತ್ತಿದ್ದಾರೆ ಎನ್ನಲಾಗುತ್ತಿದೆ. ಸಿದ್ದಾರ್ಥ್ ಅವರ ಕಾರು ಚಾಲಕ ಬಸವರಾಜ್ರಿಂದ ಹೇಳಿಕೆ ಪಡೆದು, ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲು ನೀಲಮಣಿ ರಾಜು ಸೂಚನೆ ನೀಡಿದ್ದಾರೆ.
ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ಅಳಿಯ ವಿ.ಜಿ.ಸಿದ್ದಾರ್ಥ್ ಅವರ ದಿಢೀರ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯ ಮೀನುಗಾರರು ನದಿಯಲ್ಲಿ ತೀವ್ರ ಶೋಧ ನಡೆಸುತ್ತಿದ್ದಾರೆ.
ಈಗಾಗಲೇ ಬೆಂಗಳೂರಿನಲ್ಲಿರುವ ಎಸ್.ಎಂ.ಕೃಷ್ಣ ಅವರ ಮನೆಗೆ ಭೇಟಿ ನೀಡಿ, ಸಿದ್ದಾರ್ಥ್ ಪತ್ನಿ ಹಾಗೂ ಸಂಬಂಧಿಕರೊಂದಿಗೆ ಮಾತನಾಡಿದ್ದೇನೆ. ಇದರಿಂದ ಕೆಲವು ಮಾಹಿತಿಯು ದೊರಕಿದೆ. ಸೋಮವಾರ ಸಕಲೇಶಪುರಕ್ಕೆ ತೆರಳುತ್ತೇನೆ ಎಂದು ಬೆಂಗಳೂರಿನಿಂದ ಹೊರಟಿದ್ದಾಗಿ ತಿಳಿಸಿದ್ದಾರೆ. ನಂತರ ಚಾಲಕನಿಗೆ ಮಂಗಳೂರು ಕಡೆ ಹೋಗಲು ಹೇಳಿದ್ದಾರೆ. ಕಾರಿ ನೇತ್ರಾವತಿ ಸೇತುವೆ ಬಳಿ ಕಾರಿನಿಂದ ಇಳಿದು, ಸೇತುವೆ ಮೇಲೆ ಸ್ವಲ್ಪ ದೂರು ನಡೆದು ನಾಪತ್ತೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ತೀವ್ರ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮಾಹಿತಿ ನೀಡಿದರು.